ಹೈದರಾಬಾದ್/ದುಂಡಿಗಲ್: ಆಪರೇಷನ್ ಸಿಂಧೂರ್‌ನ ತೀವ್ರತೆ ಪ್ರಸ್ತುತ ಸ್ವಲ್ಪಮಟ್ಟಿಗೆ ಕಡಿಮೆಯಾಗಿರಬಹುದು, ಆದರೆ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಮತ್ತು ದಿನದ 24 ಗಂಟೆಯೂ ಯುದ್ಧಕ್ಕೆ ಸನ್ನದ್ಧವಾಗಿರುವುದೇ ಇಂದಿನ ಹೊಸ ವಾಸ್ತವ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಪ್ರತಿಪಾದಿಸಿದ್ದಾರೆ. ಶನಿವಾರ ತೆಲಂಗಾಣದ ದುಂಡಿಗಲ್‌ನಲ್ಲಿರುವ ಏರ್ ಫೋರ್ಸ್ ಅಕಾಡೆಮಿಯಲ್ಲಿ ನಡೆದ 216ನೇ ಕೋರ್ಸ್‌ನ ಫ್ಲೈಟ್ ಕೆಡೆಟ್‌ಗಳ ಪದವಿ ಪ್ರದಾನ ಪರೇಡ್ ಉದ್ದೇಶಿಸಿ ಅವರು ಮಾತನಾಡಿದರು. ನಿರಂತರ ಜಾಗರೂಕತೆ ಮತ್ತು ಗೆಲುವನ್ನು ಅಭ್ಯಾಸವಾಗಿಸಿಕೊಳ್ಳುವುದರಲ್ಲೇ ಭಾರತೀಯ ಸೇನೆಯ ಬಲ ಅಡಗಿದೆ ಎಂದು ನೂತನ ಅಧಿಕಾರಿಗಳಿಗೆ ಅವರು ಕಿವಿಮಾತು ಹೇಳಿದರು.
ಪರೋಕ್ಷವಾಗಿ ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ ಜನರಲ್ ಚೌಹಾಣ್, ಕೇವಲ ಭಾಷಣಗಳಿಂದ ಯುದ್ಧಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಇತ್ತೀಚಿನ ಬೆಳವಣಿಗೆಗಳು ಕೆಲವೊಂದು ಸಾಂಸ್ಥಿಕ ದೌರ್ಬಲ್ಯಗಳನ್ನು ತೋರಿಸುತ್ತಿವೆ ಎಂದ ಅವರು, ಬರೀ ಮಾತಿನ ಚಕಮಕಿ ಅಥವಾ ವಾಕ್ಚಾತುರ್ಯದಿಂದ ಯುದ್ಧ ಗೆಲ್ಲಲಾಗದು; ಅದಕ್ಕೆ ದೃಢವಾದ ಮತ್ತು ಉದ್ದೇಶಪೂರ್ವಕವಾದ ಕ್ರಮಗಳು ಬೇಕು ಎಂದು ಪ್ರತಿಪಾದಿಸಿದರು. ಯುದ್ಧದಲ್ಲಿ ತಪ್ಪುಗಳಿಗೆ ಅವಕಾಶವಿಲ್ಲ ಮತ್ತು ಅಲ್ಲಿ ಎರಡನೇ ಸ್ಥಾನ ಎಂಬುದಿರುವುದಿಲ್ಲ ಎಂದು ನೂತನ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಮೈಮರೆತರೆ ತೆರಬೇಕಾದ ಬೆಲೆ ಭಾರೀ ದೊಡ್ಡದಿರುತ್ತದೆ, ಆದ್ದರಿಂದ ಪ್ರತಿ ಗಂಟೆ, ಪ್ರತಿದಿನ ಎಚ್ಚರವಾಗಿರುವುದು ಮತ್ತು ಚುರುಕಾಗಿರುವುದು ನಮ್ಮ ಶಕ್ತಿಯಾಗಬೇಕು ಎಂದು ಅವರು ಕರೆ ನೀಡಿದರು.
ಭವಿಷ್ಯದ ರಕ್ಷಣಾ ವ್ಯವಸ್ಥೆಯು ‘ಜೈ’ (JAI) ಎಂಬ ಮಂತ್ರದಡಿ ಮೂರು ಪ್ರಮುಖ ಆಧಾರ ಸ್ತಂಭಗಳ ಮೇಲೆ ನಿಂತಿದೆ ಎಂದು ಜನರಲ್ ಚೌಹಾಣ್ ವಿವರಿಸಿದರು. ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಗಳು ಒಂದೇ ರಾಷ್ಟ್ರ, ಒಂದೇ ಪಡೆಯಾಗಿ ಹೋರಾಡುವ ‘ಜಂಟಿ ಕಾರ್ಯಾಚರಣೆ’, ಕೇವಲ ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕಾಗಿ ವಿಶ್ವಾಸಾರ್ಹ ರಕ್ಷಣಾ ವ್ಯವಸ್ಥೆಗಳನ್ನು ರೂಪಿಸುವ ‘ಆತ್ಮನಿರ್ಭರತೆ’ ಮತ್ತು ಕಾಲಕ್ಕಿಂತ ಮುಂದೆ ಯೋಚಿಸಿ ಹೊಸ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ‘ಇನ್ನೋವೇಶನ್’ ತತ್ವಗಳೇ ಮುಂದಿನ ದಾರಿದೀಪವಾಗಲಿವೆ ಎಂದು ಅವರು ಬಣ್ಣಿಸಿದರು.
ಹಳೆಯ ಶೈಲಿಯ ಯುದ್ಧಗಳಿಗೂ ಮತ್ತು ಭವಿಷ್ಯದ ಸಂಘರ್ಷಗಳಿಗೂ ಇರುವ ವ್ಯತ್ಯಾಸವನ್ನು ಬಿಡಿಸಿಟ್ಟ ಸಿಡಿಎಸ್, ಹಳೆಯ ಯುದ್ಧಗಳು ಕ್ರೂರವಾಗಿದ್ದವು, ಆದರೆ ಹೊಸ ಡೊಮೇನ್‌ಗಳಲ್ಲಿ ನಡೆಯುವ ಮುಂದಿನ ಯುದ್ಧಗಳು ಹೆಚ್ಚು ‘ಸ್ಮಾರ್ಟ್’ ಮತ್ತು ತ್ವರಿತವಾಗಿರುತ್ತವೆ ಎಂದು ಅಭಿಪ್ರಾಯಪಟ್ಟರು. ಭವಿಷ್ಯದ ಯುದ್ಧಗಳಲ್ಲಿ ದೈಹಿಕ ಬಲಕ್ಕಿಂತ ಬೌದ್ಧಿಕತೆ ಮತ್ತು ಆವಿಷ್ಕಾರಗಳು ಪ್ರಮುಖ ಪಾತ್ರ ವಹಿಸುತ್ತವೆ. ಯಾರು ಹೊಸ ತಂತ್ರಜ್ಞಾನ ಮತ್ತು ಗಡಿಗಳನ್ನು ಕರಗತ ಮಾಡಿಕೊಳ್ಳುತ್ತಾರೋ ಅವರೇ ಭವಿಷ್ಯದ ಸಂಘರ್ಷಗಳಲ್ಲಿ ಮೇಲುಗೈ ಸಾಧಿಸಲಿದ್ದಾರೆ ಎಂದು ವಿಶ್ಲೇಷಿಸಿದರು.
ಇದನ್ನೂ ಓದಿ: ಎಚ್-1ಬಿ ವೀಸಾಕ್ಕೆ $1 ಲಕ್ಷ ಶುಲ್ಕ : ಟ್ರಂಪ್ ಸರ್ಕಾರದ ವಿರುದ್ಧ 19 ರಾಜ್ಯಗಳ ನ್ಯಾಯಾಂಗ ಸಮರ



















