ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್(Saif Ali Khan) ಮೇಲಿನ ದಾಳಿಗೆ ಸಂಬಂಧಿಸಿ ಒಂದೊಂದೇ ಅಚ್ಚರಿಯ ಮಾಹಿತಿ ಬಹಿರಂಗವಾಗುತ್ತಿದೆ. ಮಧ್ಯರಾತ್ರಿಯ ಬಳಿಕ ಸೈಫ್ ಮನೆಯೊಳಗೆ ಯಾರೊಬ್ಬರೂ ಪ್ರವೇಶಿಸಿಲ್ಲ. ದಾಳಿ ನಡೆಯುವ 2 ಗಂಟೆಗೆ ಮುಂಚಿನ ಸಿಸಿಟಿವಿ ದೃಶ್ಯಾವಳಿಗಳನ್ನೆಲ್ಲ ಪೊಲೀಸರು ಪರಿಶೀಲಿಸಿದ್ದು, ಯಾರೂ ಮನೆಗೆ ಎಂಟ್ರಿ ಪಡೆದಿಲ್ಲ ಎನ್ನುವುದು ದೃಢಪಟ್ಟಿದೆ. ಹೀಗಾಗಿ, ದಾಳಿಕೋರನು ಅದಕ್ಕೂ ಮೊದಲೇ ಸೈಫ್ ಮನೆಯನ್ನು ಪ್ರವೇಶಿಸಿ, ಅವಿತುಕೊಂಡಿದ್ದಿರಬಹುದು. ಸಮಯ ನೋಡಿಕೊಂಡು ನಟನ ಮೇಲೆ ದಾಳಿ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ತಡರಾತ್ರಿ ಸುಮಾರು 2.30ರ ಸುಮಾರಿಗೆ ದರೋಡೆಕೋರನು ಸೈಫ್ ಗೆ 6 ಬಾರಿ ಚೂರಿ ಇರಿದು, ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಆತ ಮೊದಲೇ ಮನೆಯನ್ನು ಪ್ರವೇಶಿಸಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಇನ್ನೊಂದೆಡೆ, ಸೈಫ್ ಮನೆಯಲ್ಲಿ ಕೆಲಸ ಮಾಡುವ ಆಳುಗಳಲ್ಲಿ ಒಬ್ಬನೊಂದಿಗೆ ಈ ದಾಳಿಕೋರ ನಂಟು ಹೊಂದಿರಬಹುದು. ಆತನೇ ದರೋಡೆಕೋರನನ್ನು ಒಳಗೆ ಬಿಟ್ಟಿರಬಹುದು ಎಂಬ ಅನುಮಾನವೂ ಇದೆ. ಈ ಹಿನ್ನೆಲೆಯಲ್ಲಿ ಮನೆಯಾಳುಗಳನ್ನು ತನಿಖೆಗೆ ಒಳಪಡಿಸಲಾಗುತ್ತಿದೆ ಎಂದೂ ಪೊಲೀಸರು ಹೇಳಿದ್ದಾರೆ.
ರಾಜಕೀಯ ವಾಕ್ಸಮರ ಆರಂಭ:
ಘಟನೆ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ(maharashtra) ರಾಜಕೀಯ ವಾಕ್ಸಮರ ಆರಂಭವಾಗಿದೆ. ಸಿಎಂ ದೇವೇಂದ್ರ ಫಡ್ನವೀಸ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿವೆ. ಶಿವಸೇನೆ ಉದ್ಧವ್ ಠಾಕ್ರೆ ಬಣದ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದು, “ಮುಂಬೈನಲ್ಲಿ ಮತ್ತೊಂದು ಹೈಪ್ರೊಫೈಲ್ ವ್ಯಕ್ತಿಯ ಮೇಲೆ ದಾಳಿ ನಡೆದಿದೆ ಎಂದರೆ ಎಂಥ ನಾಚಿಕೆಗೇಡಿನ ಸಂಗತಿ. ಇದು ಮುಂಬೈ ಪೊಲೀಸರು(police) ಮತ್ತು ಗೃಹ ಸಚಿವರ ಕಾರ್ಯವೈಖರಿ ಬಗ್ಗೆ ಪ್ರಶ್ನೆಯೇಳುವಂತೆ ಮಾಡಿದೆ.
ಇತ್ತೀಚೆಗೆ ಹತ್ಯೆಗೀಡಾದ ಎನ್ ಸಿಪಿ ನಾಯಕ ಬಾಬಾ ಸಿದ್ದೀಕಿಯವರ ಕುಟುಂಬ ಇನ್ನೂ ನ್ಯಾಯಕ್ಕಾಗಿ ಕಾಯುತ್ತಿದೆ. ನಟ ಸಲ್ಮಾನ್ ಖಾನ್ ಅವರು ಬುಲೆಟ್ ಪ್ರೂಫ್ ಮನೆಯೊಳಗೆ ಬದುಕುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಬಹುತೇಕ ಸೆಲೆಬ್ರಿಟಿಗಳೇ ವಾಸವಿರುವಂಥ ಬಾಂದ್ರಾದಲ್ಲಿ ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆದಿದೆ. ಮುಂಬೈನಲ್ಲಿ ಸೆಲೆಬ್ರಿಟಿಗಳೇ ಸೇಫ್ ಆಗಿಲ್ಲ ಎಂದ ಮೇಲೆ ಇನ್ನು ಉಳಿದವರ ಕಥೆಯೇನು” ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಸೈಫ್ ಬೇಗ ಗುಣಮುಖರಾಗಲಿ ಎಂದು ಆಶಿಸಿದ್ದಾರೆ.
ಇನ್ನು, ನಟಿ, ನಿರ್ಮಾಪತಿ ಪೂಜಾ ಭಟ್ ಅವರೂ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಮುಂಬೈನಲ್ಲಿ ಯಾವತ್ತೂ ಇಷ್ಟೊಂದು ಅಸುರಕ್ಷತೆಯ ಭಾವನೆ ಮೂಡಿರಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಪ್ರಸ್ತುತ ಸೈಫ್ ಅವರು ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರ ತಂಡ ತಿಳಿಸಿದೆ.