ಬೆಂಗಳೂರು: ಜನರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ಯಾರೂ ಏನೂ ಮಾಡಲು ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಶಿವಾಜಿನಗರದ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಚಿಕಿತ್ಸಾ ವ್ಯವಸ್ಥೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಾನು ಹಿಂದೆ ಸಿಎಂ ಆಗಿದ್ದಾಗ, ಅನ್ನಭಾಗ್ಯ, ಶಾದಿ ಭಾಗ್ಯ, ಶೂ ಭಾಗ್ಯ, ಇಂದಿರಾ ಕ್ಯಾಂಟೀನ್, ಮನಸ್ವಿನಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೆ. ಯಾವುದೇ ಜಾತಿ-ಧರ್ಮದ ಬಡವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಿ ಮುಖ್ಯವಾಹಿನಿಗಿ ಬರುವಂತಾಗಲು ಐದು ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ.
ಆದರೆ, ಬಿಜೆಪಿ ಮಾತ್ರ ಬಡವರ ಪರ ನಾವು ಕೆಲಸ ಮಾಡುವುದನ್ನು ಸಹಿಸುತ್ತಿಲ್ಲ. ಬಡವರು ಶಕ್ತಿವಂತರಾದರೆ, ಅವರ ಮೇಲೆ ಶೋಷಣೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸುಳ್ಳನ್ನೇ ಸತ್ಯ ಮಾಡಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಗಳಿಗೆ ಹೋಗಲಾಗದೇ ರೋಗಿಗಳ ಸಾವು- ನೋವು ಸಂಭವಿಸಬಾರದೆಂಬ ಉದ್ದೇಶದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಆಸ್ಪತ್ರೆಗಳನ್ನು ಪ್ರಾರಂಭಿಸುವ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಬಿಜೆಪಿ ಈ ಯೋಜನೆ ರದ್ದು ಮಾಡಿತು.
‘ಸಮಾಜದಲ್ಲಿ ಬಡವರು ಮತ್ತು ಕೆಳ-ಮಧ್ಯಮ ವರ್ಗದವರು ಸರ್ಕಾರಿ ಆಸ್ಪತ್ರೆಗಳ ಮೇಲೆಯೇ ಅವಲಂಬಿಸಿರುತ್ತಾರೆ. ಖಾಸಗಿ ಆಸ್ಪತ್ರೆಯಲ್ಲಿ ದೊರೆಯುವಂತಹ ಗುಣಮಟ್ಟದ ಆರೋಗ್ಯ ಸೌಲಭ್ಯ ಸೂಪಲ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅವರಿಗೆ ದೊರೆಯಲಿದೆ. ಆಸ್ಪತ್ರೆಯ ಶುಚಿತ್ವವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ. ಬಡವರಿಗಾಗಿ ನಾವು ಈ ರೀತಿಯ ಸೌಲಭ್ಯ ಒದಗಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.