ಬಿಪಿಎಲ್ ಪಡಿತರದಾರರಿಗೆ ‘ಅನ್ನಭಾಗ್ಯ’ ಯೋಜನೆಯಡಿ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿಗೆ ಸರ್ಕಾರ ಹಣ ನೀಡುತ್ತಿತ್ತು. ಆದರೆ, ಇನ್ನು ಮುಂದೆ ಹಣದ ಬದಲು ಪರ್ಯಾಯವಾಗಿ ತೊಗರಿಬೇಳೆ, ತಾಳೆಎಣ್ಣೆ, ಸಕ್ಕರೆ ಹಾಗೂ ಅಯೋಡೈಸ್ಡ್ ಉಪ್ಪು ನೀಡಲು ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಮುಂದಾಗಿದೆ.
ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನವೇ ಬಿಪಿಎಲ್ ಕಾರ್ಡ್ ನ ಪ್ರತಿ ಫಲಾನುಭವಿಗೆ ತಲಾ 10 ಕೆ.ಜಿ. ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ರಾಜ್ಯಕ್ಕೆ ಸಮರ್ಪಕ ಅಕ್ಕಿ ದಾಸ್ತಾನು ಆಗದ ಹಿನ್ನೆಲೆಯಲ್ಲಿ 5 ಕೆ.ಜಿ. ಅಕ್ಕಿ ಕೊಟ್ಟು, ಇನ್ನುಳಿದ 5 ಕೆಜಿ ಅಕ್ಕಿಗೆ ನಗದು ಪಾವತಿಸಲಾಗುತ್ತಿತ್ತು. ಇದಕ್ಕೆ ಸರಕಾರ ಪ್ರತಿ ತಿಂಗಳು ಬರೋಬ್ಬರಿ 700 ಕೋಟಿಗೂ ಅಧಿಕ ಹಣ ಭರಿಸಬೇಕಾಗುತ್ತಿತ್ತು.
ಆದರೆ, ಈಗ ಹಣದ ಬದಲಾಗಿ ಪರ್ಯಾಯ ದಿನಸಿ ಪದಾರ್ಥಗಳನ್ನು ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದಾಗಿ ಸರ್ಕಾರಕ್ಕೆ ಉಳಿತಾಯವೂ ಆಗಲಿದೆ. ಪಡಿತರ ಕುಟುಂಬದಲ್ಲಿ ನಾಲ್ವರು ಸದಸ್ಯರಿದ್ದರೆ (ಕೆ.ಜಿ.ಗೆ 34 ರೂ.ನಂತೆ ಪ್ರತಿ ಸದಸ್ಯರಿಗೆ 170 ರೂ.) 680 ರೂ.ಗಳನ್ನು ಖಾತೆಗೆ ಜಮೆ ಮಾಡಬೇಕಾಗಿತ್ತು. ಈಗ 2 ಕೆ.ಜಿ. ತೊಗರಿ ಬೇಳೆ, 1 ಕೆಜಿ ಸಕ್ಕರೆ, ತಾಳೆಎಣ್ಣೆ ಒಂದು ಲೀಟರ್, ಒಂದು ಕೆ.ಜಿ. ಅಯೋಡೈಸ್ಡ್ ಉಪ್ಪು ನೀಡಲು ಸರ್ಕಾರ ಮುಂದಾಗಿದೆ.
ಈ ಕುರಿತ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಯ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಈ ಉತ್ಪನ್ನಗಳಿಗೆ ಸುಮಾರು 500 ರೂ. ನಿಂದ 550 ರೂ. ವೆಚ್ಚವಾಗುತ್ತದೆ. ಆಗ ಸರ್ಕಾರಕ್ಕೆ ಪ್ರತಿಯೊಬ್ಬ ಫಲಾನುಭವಿಯಿಂದ 130 ರಿಂದ 180 ರೂ. ಹಣ ಉಳಿತಾಯವಾಗುತ್ತದೆ. ಇದನ್ನು 4.50 ಕೋಟಿ ಫಲಾನುಭವಿಗಳಿಗೆ ವಿತರಿಸುವುದರಿಂದಾಗಿ ನೂರಾರು ಕೋಟಿ ರೂ. ಹಣ ಉಳಿತಾಯವಾಗುತ್ತದೆ.
ರಾಜ್ಯದ ತೊಗರಿ ಮಂಡಳಿ, ಸಕ್ಕರೆ ನಿರ್ದೇಶನಾಲಯ, ಕರ್ನಾಟಕ ಆಯಿಲ್ ಫೆಡರೇಷನ್ ಮೂಲಕ ಈ ಆಹಾರಗಳನ್ನು ತರಿಸಿಕೊಂಡರೆ, ಉಪ್ಪನ್ನು ಗುಜರಾತ್ ನಿಂದ ತರಿಸಿಕೊಳ್ಳಲು ಉದ್ದೇಶಿಸಲಾಗಿದೆ. ಶೇ. 93ರಷ್ಟು ಫಲಾನುಭವಿಗಳು ಕೂಡ ಅಕ್ಕಿ ಹಣದ ಬದಲಿಗೆ ಬೇಳೆ, ಸಕ್ಕರೆ, ಎಣ್ಣೆ, ಉಪ್ಪು ನೀಡಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ. ಹೀಗಾಗಿ ಸರ್ಕಾರ ಈ ಕುರಿತು ಚಿಂತನೆ ನಡೆಸುತ್ತಿದೆ.