ನವದೆಹಲಿ: ಭಾರತ ಮತ್ತು ಪಾಕಿಸ್ತಾನವು ಇಂದು ಸೇನಾ ಕಾರ್ಯಾಚರಣೆಗಳ ಪ್ರಧಾನ ನಿರ್ದೇಶಕರ (ಡಿಜಿಎಂಒ) ಮಟ್ಟದ ಮಾತುಕತೆ ನಡೆಸುವುದಿಲ್ಲ ಎಂದು ಭಾರತೀಯ ಸೇನೆ ದೃಢಪಡಿಸಿದೆ. ಜೊತೆಗೆ, ಮೇ 12ರಂದು ನಡೆದಿದ್ದ ಡಿಜಿಎಂಒ ಮಟ್ಟದ ಮಾತುಕತೆಯಲ್ಲಿ ಚರ್ಚಿಸಲಾದಂತೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ಒಪ್ಪಂದವು ಮುಂದುವರಿಯಲಿದೆ ಎಂದೂ ಸ್ಪಷ್ಟಪಡಿಸಿದೆ.
“ಇಂದು ಯಾವುದೇ ಡಿಜಿಎಂಒ ಸಭೆ ನಡೆಯುವುದಿಲ್ಲ. ಮೊದಲ ಹಂತದ ಮಾತುಕತೆಯಲ್ಲಿ ಆಗಿರುವ ನಿರ್ಧಾರಕ್ಕೆ ಯಾವುದೇ ಎಕ್ಸ್‌ಪೈರಿ ದಿನಾಂಕ ಇಲ್ಲ. ಹಾಗಾಗಿ ಉಭಯ ದೇಶಗಳ ನಡುವಿನ ಕದನ ವಿರಾಮ ಮುಂದುವರಿಯಲಿದೆ” ಎಂದು ಸೇನೆಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಾದ ಬಳಿಕ ಭಾರತ ಮತ್ತು ಪಾಕ್ ನಡುವೆ ಸಂಘರ್ಷ ಏರ್ಪಟ್ಟಿತ್ತು. ಉಗ್ರರ ದಾಳಿಗೆ ಪ್ರತಿಯಾಗಿ ಭಾರತವು ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿದ ಬಳಿಕ ಈ ಸಂಘರ್ಷ ತೀವ್ರಗೊಂಡಿತ್ತು. ಕೊನೆಗೆ ಎರಡೂ ದೇಶಗಳು ಮಾತುಕತೆ ನಡೆಸಿ ಕದನ ವಿರಾಮ ನಿರ್ಧಾರಕ್ಕೆ ಬಂದಿದ್ದವು.
ಮೇ 12ರಂದು ಎರಡೂ ದೇಶಗಳ ಸೇನಾಧಿಕಾರಿಗಳ ಮೊದಲ ಹಂತದ ಸಭೆ ನಡೆದಿತ್ತು. ಎರಡೂ ದೇಶಗಳು ಒಂದೇ ಒಂದು ಗುಂಡು ಹಾರಿಸಬಾರದು ಮತ್ತು ಆಕ್ರಮಣಕಾರಿಯಾಗಿ ವರ್ತಿಸಬಾರದು ಎಂದು ಈ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಜತೆಗೆ ಕದನ ವಿರಾಮವನ್ನು ಮುಂದುವರಿಸಲಾಗಿತ್ತು.
ಇದೇ ವೇಳೆ, ಕದನ ವಿರಾಮ ಒಪ್ಪಂದ ಜಾರಿಯಾದ ಬಳಿಕವೂ ಪಾಕಿಸ್ತಾನದ ಸೇನೆಯು ಗಡಿಯಲ್ಲಿ ಉಪಟಳ ಆರಂಭಿಸಿತ್ತು. ಅಂತಾರಾಷ್ಟ್ರೀಯ ಗಡಿ ಮತ್ತು ಎಲ್ಒಸಿ ಬಳಿ ದಾಳಿ ನಡೆಸುವ ಮೂಲಕ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿತ್ತು. ಇದಕ್ಕೆ ಭಾರತೀಯ ಸೇನೆಯೂ ತಕ್ಕ ಪ್ರತ್ಯುತ್ತರ ನೀಡಿದೆ.
ಡಿಜಿಎಂಗಳ ಮಟ್ಟದ ಮತ್ತೊಂದು ಸಭೆಯು ಮೇ 18ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿದ್ದವು. ಆದರೆ ಇದನ್ನು ಈಗ ಸೇನೆ ತಳ್ಳಿಹಾಕಿದ್ದು, ಈಗ ಯಾವುದೇ ಸಭೆ ಇಲ್ಲ. ಕದನ ವಿರಾಮ ಒಪ್ಪಂದ ಮುಂದುವರಿಯಲಿದೆ ಎಂದಿದ್ದಾರೆ.



















