ನವದೆಹಲಿ: ದೆಹಲಿಯ ಆರೋಗ್ಯ ಮೂಲಸೌಕರ್ಯಗಳ ಕುರಿತು ಮಹಾಲೇಖಪಾಲರ ವರದಿ(ಸಿಎಜಿ) ವರದಿಯು ಆಮ್ ಆದ್ಮಿ ಪಕ್ಷದ ಸರ್ಕಾರದ ದುರಾಡಳಿತವನ್ನು ಬಿಚ್ಚಿಟ್ಟಿದೆ. ಕಳೆದ ಆರು ವರ್ಷಗಳಲ್ಲಿ ತೀವ್ರ ಹಣಕಾಸಿನ ದುರುಪಯೋಗ, ನಿರ್ಲಕ್ಷ್ಯ ಮತ್ತು ಉತ್ತರದಾಯಿತ್ವದ ಕೊರತೆಯನ್ನು ಇದು ಎತ್ತಿ ತೋರಿಸಿದೆ ಎಂದು ಮೂಲಗಳು ತಿಳಿಸಿವೆ.
ಇಂದು ದೆಹಲಿ ವಿಧಾನಸಭೆಯಲ್ಲಿ ಈ ವರದಿ ಮಂಡನೆಯಾಗುವ ನಿರೀಕ್ಷೆಯಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಉಪಕರಣಗಳ ತೀವ್ರ ಕೊರತೆ ಹಾಗೂ ಮೊಹಲ್ಲಾ ಕ್ಲಿನಿಕ್‌ಗಳಲ್ಲಿನ ಕಳಪೆ ಮೂಲಸೌಕರ್ಯಗಳ ಬಗ್ಗೆಯೂ ವರದಿ ಬೆಳಕು ಚೆಲ್ಲಿದೆ.
ಸಿಎಜಿ ವರದಿಯ ಪ್ರಮುಖ ಅಂಶಗಳು ಹೀಗಿವೆ:
- ಅನೇಕ ಆಸ್ಪತ್ರೆಗಳಲ್ಲಿ ನಿರ್ಣಾಯಕ ಸೇವೆಗಳೇ ಇಲ್ಲ: ದೆಹಲಿಯ ಹಲವಾರು ಆಸ್ಪತ್ರೆಗಳು ನಿರ್ಣಾಯಕ ವೈದ್ಯಕೀಯ ಸೇವೆಗಳ ತೀವ್ರ ಕೊರತೆಯನ್ನು ಎದುರಿಸುತ್ತಿವೆ ಎಂದು ವರದಿ ಬಹಿರಂಗಪಡಿಸಿದೆ. ನಗರದ 27 ಆಸ್ಪತ್ರೆಗಳ ಪೈಕಿ 14 ಆಸ್ಪತ್ರೆಗಳಲ್ಲಿ ಐಸಿಯು ಸೌಲಭ್ಯಗಳಿಲ್ಲ, 16 ಆಸ್ಪತ್ರೆಗಳಲ್ಲಿ ಬ್ಲಡ್ ಬ್ಯಾಂಕ್ ಗಳಿಲ್ಲ. ಎಂಟು ಆಸ್ಪತ್ರೆಗಳಲ್ಲಿ ಆಮ್ಲಜನಕದ ಪೂರೈಕೆಯೇ ಇಲ್ಲ, 15 ಆಸ್ಪತ್ರೆಗಳಲ್ಲಿ ಶವಾಗಾರವಿಲ್ಲ. 12 ಆಸ್ಪತ್ರೆಗಳು ಆಂಬ್ಯುಲೆನ್ಸ್ ಸೇವೆಗಳಿಲ್ಲದೆಯೇ ಕಾರ್ಯನಿರ್ವಹಿಸುತ್ತಿವೆ ಎಂದಿದೆ ವರದಿ.
- ಮೊಹಲ್ಲಾ ಕ್ಲಿನಿಕ್ ಗಳು ಮತ್ತು ಆಯುಷ್ ಡಿಸ್ಪೆನ್ಸರಿಗಳಲ್ಲಿ ಕಳಪೆ ಮೂಲಸೌಕರ್ಯ: ಅನೇಕ ಮೊಹಲ್ಲಾ ಕ್ಲಿನಿಕ್ ಗಳಲ್ಲಿ ಶೌಚಾಲಯಗಳು, ವಿದ್ಯುತ್ ಬ್ಯಾಕಪ್ ಮತ್ತು ಆರೋಗ್ಯ ತಪಾಸಣೆಗೆ ಅಗತ್ಯವಿರುವ ಟೇಬಲ್ ಕೂಡ ಇಲ್ಲ. ಆಯುಷ್ ಡಿಸ್ಪೆನ್ಸರಿಗಳೂ ಇದೇ ರೀತಿಯ ಕೊರತೆಗಳನ್ನು ಎದುರಿಸುತ್ತಿವೆ.
- ಆರೋಗ್ಯ ಕಾರ್ಯಕರ್ತರ ತೀವ್ರ ಕೊರತೆ: ದೆಹಲಿ ಆಸ್ಪತ್ರೆಗಳು ಸಿಬ್ಬಂದಿಯ ತೀವ್ರ ಕೊರತೆಯನ್ನು ಎದುರಿಸುತ್ತಿವೆ. ಶೇಕಡಾ 21 ರಷ್ಟು ದಾದಿಯರ ಕೊರತೆ, ಶೇಕಡಾ 38ರಷ್ಟು ಅರೆವೈದ್ಯಕೀಯ ಸಿಬ್ಬಂದಿಯ ಕೊರತೆ, ಕೆಲವು ಆಸ್ಪತ್ರೆಗಳಲ್ಲಿ ಶೇಕಡಾ 50-96 ರಷ್ಟು ವೈದ್ಯರು ಮತ್ತು ದಾದಿಯರ ಕೊರತೆಯಿದೆ.
- ಆಸ್ಪತ್ರೆ ಪ್ರಧಾನ ಮೂಲಸೌಕರ್ಯಗಳನ್ನು ಬಳಸುವವರೇ ಇಲ್ಲ: ರಾಜೀವ್ ಗಾಂಧಿ ಮತ್ತು ಜನಕಪುರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಆಪರೇಷನ್ ಥಿಯೇಟರ್‌ಗಳು, ಐಸಿಯು ಹಾಸಿಗೆಗಳು ಮತ್ತು ಖಾಸಗಿ ಕೊಠಡಿಗಳು ಬಳಕೆಯಾಗದೇ ಉಳಿದಿವೆ.
- ಕೋವಿಡ್ ತುರ್ತು ನಿಧಿ ಬಳಸುವಲ್ಲೂ ನಿರ್ಲಕ್ಷ್ಯ: ಕೋವಿಡ್ -19 ಸೋಂಕಿನ ಸಂದರ್ಭದಲ್ಲಿ ಆರೋಗ್ಯ ಸೇವೆಗಾಗಿ ನಿಗದಿಪಡಿಸಿದ 787.91 ಕೋಟಿ ರೂ.ಗಳಲ್ಲಿ ಕೇವಲ 582.84 ಕೋಟಿ ರೂ.ಗಳನ್ನು ಮಾತ್ರ ಬಳಸಲಾಗಿದೆ. ಆರೋಗ್ಯ ಕಾರ್ಯಕರ್ತರಿಗೆ ಮೀಸಲಾದ ಒಟ್ಟು 30.52 ಕೋಟಿ ರೂ.ಗಳು ಖರ್ಚಾಗದೆ ಉಳಿದಿದ್ದರೆ, ಅಗತ್ಯ ಔಷಧಿಗಳು ಮತ್ತು ಪಿಪಿಇ ಕಿಟ್‌ಗಳಿಗಾಗಿ ನಿಗದಿಪಡಿಸಿದ 83.14 ಕೋಟಿ ರೂ.ಗಳು ಕೂಡ ಬಳಕೆಯಾಗದೆ ಉಳಿದಿವೆ.
- ಆಸ್ಪತ್ರೆ ಹಾಸಿಗೆ ಸಾಮರ್ಥ್ಯವನ್ನು ವಿಸ್ತರಿಸುವಲ್ಲಿ ವಿಫಲ: ಸರ್ಕಾರವು ಆಸ್ಪತ್ರೆಗಳಲ್ಲಿ 32,000 ಹೊಸ ಹಾಸಿಗೆಗಳ ಭರವಸೆ ನೀಡಿತ್ತು. ಆದರೆ, ಕೇವಲ 1,357 (4.24%) ಹಾಸಿಗೆಗಳನ್ನಷ್ಟೇ ಸೇರ್ಪಡೆ ಮಾಡಲಾಗಿದೆ. ಕೆಲವು ಆಸ್ಪತ್ರೆಗಳಲ್ಲಿ ರೋಗಿಗಳು ನೆಲದ ಮೇಲೆಯೇ ಮಲಗಬೇಕಾದ ಪರಿಸ್ಥಿತಿಯಿದೆ.
- ಆಸ್ಪತ್ರೆ ಯೋಜನೆ ವಿಳಂಬ, ವೆಚ್ಚದ ಹೆಚ್ಚಳ: ಪ್ರಮುಖ ಆಸ್ಪತ್ರೆ ಯೋಜನೆಗಳು 3-6 ವರ್ಷಗಳಷ್ಟು ವಿಳಂಬವನ್ನು ಎದುರಿಸಿವೆ. ಹೀಗಾಗಿ ಆಸ್ಪತ್ರೆ ಯೋಜನೆಗಳ ವೆಚ್ಚವೂ ವಿಪರೀತ ಹೆಚ್ಚಳವಾಗಿ 382.52 ಕೋಟಿ ರೂ.ಗೆ ತಲುಪಿವೆ. ಇದರಿಂದಾಗಿ ಇಂದಿರಾ ಗಾಂಧಿ ಆಸ್ಪತ್ರೆ, ಬುರಾರಿ ಆಸ್ಪತ್ರೆ ಮತ್ತು ಎಂಎ ಡೆಂಟಲ್ ಪಿಎಚ್ -2 ನಂತಹ ಆಸ್ಪತ್ರೆಗಳ ಮೇಲೆ ಗಮನಾರ್ಹವಾಗಿ ಪ್ರತಿಕೂಲ ಪರಿಣಾಮ ಉಂಟಾಗಿದೆ.
• ಶಸ್ತ್ರಚಿಕಿತ್ಸೆಗೆ ದೀರ್ಘಕಾಲ ಕಾಯಬೇಕಾಗಿದೆ: ಲೋಕನಾಯಕ್ ಆಸ್ಪತ್ರೆಯಲ್ಲಿ ರೋಗಿಗಳು ಸಾಮಾನ್ಯ ಶಸ್ತ್ರಚಿಕಿತ್ಸೆಗೆ 2-3 ತಿಂಗಳು ಮತ್ತು ಸುಟ್ಟಗಾಯ, ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಗೆ 6-8 ತಿಂಗಳು ಕಾಯಬೇಕಾದ ಪರಿಸ್ಥಿತಿಯಿದೆ. ಸಿಎನ್ಬಿಸಿ ಆಸ್ಪತ್ರೆಯಲ್ಲಿ ಮಕ್ಕಳ ಶಸ್ತ್ರಚಿಕಿತ್ಸೆಗಾಗಿ 12 ತಿಂಗಳ ಕಾಯಬೇಕಾಗಿದೆ.
ಮೂಲಗಳ ಪ್ರಕಾರ, ಇದು ಸಿಎಜಿಯ ಎರಡನೇ ವರದಿಯಾಗಿದ್ದು, ಇದನ್ನು ವಿಧಾನಸಭೆಯಲ್ಲಿ ಮಂಡಿಸಲು ದೆಹಲಿಯ ನೂತನ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಮಂಗಳವಾರವಷ್ಟೇ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ದೆಹಲಿ ಅಬಕಾರಿ ನೀತಿಯ ಕುರಿತಾದ ಸಿಎಜಿ ವರದಿಯನ್ನು ಮಂಡಿಸಿದ್ದರು.