ತಿರುವನಂತಪುರ: ‘ವಯನಾಡ್ ಭೂಕುಸಿತ ಘಟನೆ ನಡೆದು ಹಲವು ದಿನಗಳೇ ಕಳೆದರೂ ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಯಾಗಿಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮಗಳ ಪುನರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಯಾವುದೇ ಅನುದಾನ ನೀಡಿಲ್ಲ. ವಯನಾಡ್ ದುರಂತದಲ್ಲಿ ಇಲ್ಲಿಯವರೆಗೆ ಸುಮಾರು 200 ಜನ ಸಾವನ್ನಪ್ಪಿದ್ದಾರೆ. ಪುನರ್ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸರ್ಕಾರವು ನೆರವು ಹಾಗೂ ವಿಶೇಷ ಅನುದಾನ ನೀಡುವುದಾಗಿ ವಾಗ್ದಾನ ನೀಡಿತ್ತು. ಆದರೆ, ಇದುವರೆಗೂ ಯಾವುದೇ ಆರ್ಥಿಕ ನೆರವು ನೀಡಿಲ್ಲ. ರಾಜ್ಯ ಸರ್ಕಾರವು ತುರ್ತಾಗಿ 219.2 ಕೋಟಿ ರೂ. ಹಾಗೂ ಎಸ್ ಡಿಆರ್ ಎಫ್ ನ ಕೇಂದ್ರದ ಪಾಲು ಹೆಚ್ಚುವರಿಯಾಗಿ ನೀಡುವಂತೆ ಮನವಿ ಮಾಡಿತ್ತು. ಆದರೆ ಯಾವುದೇ ನೆರವು ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಎಸ್ ಡಿಆರ್ ಎಫ್ ನ ಕೇಂದ್ರ ಪಾಲಿನ 291.1 ಕೋಟಿ ಪೈಕಿ ಮೊದಲ ಕಂತಿನಲ್ಲಿ 145.6 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. ಇದೊಂದು ಸಹಜ ಪ್ರಕ್ರಿಯೆಯಾಗಿದ್ದು, ಯಾವುದೇ ವಿಶೇಷ ಅನುದಾನ ನೀಡಿಲ್ಲ ಎಂದು ಹೇಳಿದ್ದಾರೆ.
ದುರಂತದಲ್ಲಿ ಹೆತ್ತವರನ್ನು ಕಳೆದುಕೊಂಡ 6 ಮಕ್ಕಳಿಗೆ ತಲಾ 10 ಲಕ್ಷ ರೂ. ಹಾಗೂ ಓರ್ವರನ್ನು ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡಲು ನಿರ್ಧರಿಸಲಾಗಿದೆ. ಮೆಪ್ಪಾಡಿ ಗ್ರಾಮ ಪಂಚಾಯತ್ ನ ನೆಡುಂಬಲ ಎಸ್ಟೇಟ್, ಕಲ್ಪೆಟ್ಟ ಮುನ್ಸಿಪಾಲಿಟಿಯ ಎಲ್ ಸ್ಟೋನ್ ಎಸ್ಟೇಟ್ ನಲ್ಲಿ ಮಾದರಿ ಟೌನ್ ಶಿಪ್ ನಿರ್ಮಾಣ ಮಾಡಿ, ಮನೆ ಕಳೆದುಕೊಂಡವರಿಗೆ ಪುನರ್ ವಸತಿ ಕಲ್ಪಿಸಲಾಗುವುದು ಎಂದಿದ್ದಾರೆ. ಕರ್ನಾಟಕದ ಶಿರೂರ ಭೂಕುಸಿತಕ್ಕೆ ಸಿಲುಕಿ ಗಂಗಾವಳಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಕೇರಳದ ಅರ್ಜುನ್ ಕುಟುಂಬಕ್ಕೆ ಕೇರಳ ಸರ್ಕಾರ 7 ಲಕ್ಷ ರೂ. ಪರಿಹಾರ ನೀಡಿದೆ.


















