ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು, ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಈ ಮಧ್ಯೆ ಕಾಂಗ್ರೆಸ್ ನ ಆರೋಪಕ್ಕೆ ರಾಜ್ಯಪಾಲರ ಕಚೇರಿ ಮತ್ತೊಂದು ತಿರುಗೇಟು ನೀಡಿದೆ.
ರಾಜ್ಯಪಾಲರು, ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುತ್ತಿದ್ದಂತೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೂ ಮುಂಚೆಯೇ ನಾವು ಹಲವು ನಾಯಕರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದೇವು. ಆದರೆ, ಅವುಗಳಿಗೆ ಮಾನ್ಯತೆ ನೀಡದೆ, ಏಕಪಕ್ಷೀಯವಾಗಿ ರಾಜ್ಯಪಾಲರು ವರ್ತಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು.
ಆದರೆ, ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಕುಮಾರಸ್ವಾಮಿ, ಬಿಜೆಪಿ ನಾಯಕ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಹಾಗೂ ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ವಿಚಾರಣೆಗೆ ಸಂಬಂಧಿಸಿದಂತೆ ಯಾವುದೇ ಕಡತ ಕಚೇರಿಯಲ್ಲಿ ಬಾಕಿ ಇಲ್ಲ ಎಂದು ರಾಜ್ಯಪಾಲರ ಕಚೇರಿ ತಿಳಿಸಿದೆ ಎನ್ನಲಾಗಿದೆ.
ಆದರೆ, ಬಿಜೆಪಿ, ಜೆಡಿಎಸ್ ನಾಯಕರ ಮೇಲಿನ ಪ್ರಕರಣಗಳ ಸಂಬಂಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಕಾಂಗ್ರೆಸ್ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆಯಿಂದ ರಾಜಭವನ ಚಲೋ ನಡೆಸಿದರು. ಈಗ ರಾಜಭವನವು, ಪ್ರಾಸಿಕ್ಯೂಷನ್ ಕಡತಗಳು ನಮ್ಮ ಕಚೇರಿಯಲ್ಲಿ ಬಾಕಿ ಇಲ್ಲ ಎಂದು ಮಾಹಿತಿ ನೀಡಿದೆ. ಹೀಗಾಗಿ ಈ ವಿಷಯದಲ್ಲಿ ಕಾಂಗ್ರೆಸ್ ಸುಳ್ಳು ಹೇಳುತ್ತಿದೆಯೋ? ಅಥವಾ ರಾಜ್ಯಪಾಲರ ಕಚೇರಿ ಸುಳ್ಳು ಹೇಳುತ್ತಿದೆಯೇ? ತಿಳಿಯದಾಗಿದೆ.
ಸಿದ್ದರಾಮಯ್ಯ ಅವರ ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ಟಿ.ಜೆ. ಅಬ್ರಾಹಂ, ವಿವಿಧ ಸಕ್ಷಮ ಪ್ರಾಧಿಕಾರಗಳು ವಿಚಾರಣೆಗೆ ಅನುಮತಿ ಕೋರಿರುವ ಪ್ರಸ್ತಾವಣೆಗಳ ಬಾಕಿ ಇರುವ ಕುರಿತಂತೆ ರಾಜ್ಯಪಾಲರ ಕಚೇರಿಗೆ ಮಾಹಿತಿ ಹಕ್ಕಿನ ಅಡಿಯಲ್ಲಿ ಅರ್ಜಿ ಸಲ್ಲಿಸಿ ಮಾಹಿತಿ ಕೇಳಿದ್ದರು. ಅಬ್ರಾಹಂ ಸಲ್ಲಿಸಿದ್ದ ಈ ಮಾಹಿತಿ ಹಕ್ಕು ಅರ್ಜಿಗೆ ರಾಜ್ಯಭವನ ಕೇವಲ 9 ದಿನಗಳಲ್ಲೇ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲಾಗಿದೆ. ಈಗ ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ಧನ ರೆಡ್ಡಿ ವಿರುದ್ಧ ವಿಚಾರಣೆಗೆ ಅನುಮತಿ ಕೋರಿರುವ ಯಾವ ಕಡತವೂ ಸಹ ರಾಜ್ಯಪಾಲರ ಕಚೇರಿಯಲ್ಲಿ ಇಲ್ಲ ಎಂದು ಮಾಹಿತಿ ಒದಗಿಸಿದೆ.
ರಾಜ್ಯಭವನದಲ್ಲಿ ಪ್ರಾಸಿಕ್ಯೂಷನ್ ಕೋರಿ ಸಲ್ಲಿಸಿರುವ ಅರ್ಜಿಗಳು ಬಾಕಿ ಇಲ್ಲವೆಂದು ವಕೀಲ ರಂಗನಾಥ್ ರೆಡ್ಡಿ ಕೋರ್ಟ್ ಗೆ ತಿಳಿಸಿದ್ದಾರೆ. ಇದಕ್ಕೆ ನ್ಯಾಯಮೂರ್ತಿ ನಾಗಪ್ರಸನ್ನ ಅವರು ನಿಮಗೆ ಈ ವಿಷಯ ಹೇಗೆ ಗೊತ್ತು ಎಂದು ಪ್ರಶ್ನಿಸಿದಾಗ, ರಂಗನಾಥ್ ರೆಡ್ಡಿ ಈ ಕುರಿತು ಆರ್ ಟಿಐ ಮೂಲಕ ಮಾಹಿತಿ ಪಡೆಯಲಾಗಿದೆ. ರಾಜಭವನ ಕಚೇರಿ ನೀಡಿರುವ ಉತ್ತರದಲ್ಲಿ ಯಾವುದೇ ಅರ್ಜಿ ಬಾಕಿ ಇಲ್ಲ ಎಂದು ಹೇಳಲಾಗಿದೆ ಎಂದು ಹೇಳಿದ್ದಾರೆ.
ಹೀಗಾಗಿ ಈ ವಿಷಯದಲ್ಲಿ ಸುಳ್ಳು ಹೇಳುತ್ತಿರುವವರು ಯಾರು ಎಂಬುವುದು ತಿಳಿಯಬೇಕಿದೆ.