ಬೆಂಗಳೂರು: ಸೋಮವಾರ ದೇಶಾದ್ಯಂತ ಈದ್ ಮಿಲಾದ್ (Eid Milad) ಹಬ್ಬವಿದ್ದು, ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಹಲವು ಕಟ್ಟು ನಿಟ್ಟಿನ ಸೂಚನೆಗಳನ್ನು ಪೊಲೀಸರು ಸೂಚಿಸಿದ್ದಾರೆ.
ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಮುಸ್ಲಿಂರು ಮೆರವಣಿಗೆ ನಡೆಸಲಿದ್ದಾರೆ. ವೈ.ಎಂ.ಸಿ.ಎ. ಮೈದಾನ, ಮಿಲ್ಲರ್ನ್ ರಸ್ತೆ ಖುದ್ದುಸಾಬ್ ಈದ್ಗಾ ಮೈದಾನ, ಶಿವಾಜಿನಗರ ಛೋಟಾ ಮೈದಾನ, ಭಾರತೀನಗರದ ಸುಲ್ತಾನ್‌ಜೀ ಗುಂಟಾ ಮೈದಾನಗಳಲ್ಲಿ ಹಾಗೂ ಇತರೆಡೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಈ ಮೆರವಣಿಗೆಗೆ ಹಲವು ರೂಲ್ಸ್ ಗಳನ್ನು ಜಾರಿಗೆ ತರಲಾಗಿದೆ.
ಮೆರವಣಿಗೆಯಲ್ಲಿ ಭಾಗವಹಿಸುವವರು ಯಾವುದೆ ಹರಿತವಾದ ವಸ್ತುಗಳನ್ನು ಹೊಂದಿರಬಾರದು. ಮೆರವಣಿಗೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಡಿಜೆಗಳನ್ನು ಬಳಸುವಂತಿಲ್ಲ. ಸ್ತಬ್ದ ಚಿತ್ರಗಳ ಮೂಲಕ ಯಾವುದೇ ಪ್ರಚೋದನಾತ್ಮಕ ಅಂಶ ತೋರಿಸಬಾರದು. ಯಾವುದೇ ಪೂಜಾ ಸ್ಥಳಗಳ (ದೇವಸ್ಥಾನ/ಚರ್ಚಗಳ) ಮುಂಭಾಗದಲ್ಲಿ ಘೋಷಣೆಗಳನ್ನು ಕೂಗಬಾರದು.
ರಾತ್ರಿ ಮೆರವಣಿಗೆ ಮುಗಿದ ನಂತರ ಬೈಕ್ ನಲ್ಲಿ ಇಬ್ಬರಿಗಿಂತ ಹೆಚ್ಚು ಜನ ಬೈಕ್ ನಲ್ಲಿ ತೆರಳುವಂತಿಲ್ಲ. ಹಿರಿಯ ನಾಗರಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ಧ್ವನಿ ವರ್ಧಕಗಳನ್ನು ಬಳಸಬೇಕು. ಬೆಳಿಗ್ಗೆ 6ರಿಂದ ರಾತ್ರಿ 10ರ ವರೆಗೆ ಮಾತ್ರ ಧ್ವನಿವರ್ಧಕ ಬಳಸಬೇಕು. ಧ್ವನಿ ವರ್ಧಕಗಳಿಂದ ಹೊರಡುವ ಶಬ್ದದ ಪ್ರಮಾಣವನ್ನು ಕಡಿಮೆ ಮಟ್ಟದಲ್ಲಿ ಇಟ್ಟುಕೊಳ್ಳಬೇಕು. ಹಾಗೂ ಯಾವುದೇ ಕಾರಣಕ್ಕೂ ಡಿ.ಜಿ. ಸೌಂಡ್ ಸಿಸ್ಟಂ ಅಳವಡಿಸಲು ಅವಕಾಶ ಇಲ್ಲ ಎಂದು ಪೊಲೀಸರು ಕಟ್ಟುನಿಟ್ಟಿನ ನಿಯಮ ರೂಪಿಸಿದ್ದಾರೆ.