ಹುಬ್ಬಳ್ಳಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಣದ ಮಧ್ಯೆ ದೊಡ್ಡ ಸಮರವೇ ನಡೆಯುತ್ತಿದೆ. ಈ ಮಧ್ಯೆ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಬಂದಿರುವ ಯತ್ನಾಳ್ ಅವರು ಆ ಕುರಿತು ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಠರು ಬೆನ್ನು ತಟ್ಟಿ ಕಳುಹಿಸಿದ್ದಾರೆ. ಹೀಗಾಗಿ ನನ್ನ ವಿರುದ್ಧ ಯಾವುದೇ ಕ್ರಮ ಇಲ್ಲ. ಉತ್ತಮ ಕೆಲಸ ಮಾಡುತ್ತಿದ್ದೇನೆ ಎಂದು ಅವರೇ ಖುಷಿ ಪಟ್ಟಿದ್ದಾರೆ. ಹೀಗಾದಾಗ ಅವರೇಕೆ ನನ್ನ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
2ನೇ ಹಂತದ ಹೋರಾಟ ಆರಂಭವಾಗಲಿದೆ. ಹೊಸಪೇಟೆಯ ನಂತರ ಚಿತ್ರದುರ್ಗ, ದಾವಣಗೆರೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮೈಸೂರು ಬೆಂಗಳೂರಿನಲ್ಲಿ ನಮ್ಮ ತಂಡ ಹೋರಾಟ ಮಾಡಲಿದೆ. ಹೈಕಮಾಂಡ್ ಗೆ ನನ್ನ ಮೇಲೆ ಪ್ರೀತಿ ಇದೆ. ನನ್ನ ವಿರುದ್ಧ ಮಾತನಾಡಿದವರಿಗೆ ಉತ್ತರ ಕೊಡಲು ನಾನು ಸದಾ ಸಿದ್ಧ. ವಕ್ಫ್ ಕಾನೂನಿನ ಬಗ್ಗೆ ನಾವು ಹೆಚ್ಚು ಗಮನ ಕೊಟ್ಟಿದ್ದೇವೆ. ಇನ್ನು ಮುಂದೆ ನಾನು ಸೈಲೆಂಟ್ ಆಗುತ್ತೇನೆ. ರಮೇಶ ವೈಲೆಂಟ್ ಆಗುತ್ತಾರೆ. ನಾವು ಶಾಂತಿಯಿಂದಲೇ ಹೋರಾಟ ನಡೆಸುತ್ತೇವೆ. ನಮ್ಮ ನಾಯಕರ ವಿರುದ್ಧ ಗುಪ್ತ ಪತ್ರಗಳನ್ನು ಬರೆಯುತ್ತೇನೆ. ವಿಜಯೇಂದ್ರ ಸೇರಿ ಎಲ್ಲರ ಬಗ್ಗೆಯೂ ಬರೆಯುತ್ತೇವೆ. ವರಿಷ್ಠರ ಗಮನಕ್ಕೆ ತರುತ್ತೇವೆ. ನಮ್ಮ ಟಾರ್ಗೆಟ್ ವಿಜಯೇಂದ್ರ ಅಲ್ಲ. ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದು ಎಂದಿದ್ದಾರೆ.