ಬೆಂಗಳೂರು : 2026-27ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯದ ಜನರ ಭರವಸೆಗಳನ್ನು ಈಡೇರಿಸುವ ಜೊತೆಗೆ ವಿತ್ತೀಯ ಶಿಸ್ತನ್ನೂ ಪಾಲಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಜೆಟ್ ಮಂಡನೆ ಬಳಿಕ ಇಂದು ಗೃಹ ಕಛೇರಿ ಕೃಷ್ಣಾದಲ್ಲಿ ಈ ಕುರಿತಾಗಿ ಮಾಧ್ಯಮಗೋಷ್ಠಿ ನೆಡೆಸಿ ಮಾತನಾಡಿದ ಸಿಎಂ, ಜಿಎಸ್ಟಿ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಹೇಗೆ ಅನ್ಯಾಯ ಆಗುತ್ತಿದೆ ಎಂದು ವಿವರಿಸಿದ್ದಾರೆ.
ಈ ವೇಳೆ ರಾಜ್ಯ ಸರ್ಕಾರ ಸಾಲದ ಮೇಲೆ ಸಾಲ ಮಾಡುತ್ತಿದೆ ಎಂದು ಬಿಜೆಪಿ ಮಾಡುತ್ತಿರುವ ಆರೋಪವನ್ನು ಸಿದ್ದರಾಮಯ್ಯ ಅಲ್ಲಗಳೆದಿದ್ದಾರೆ. ಸಾಲ ಮಾಡದೇ ಯಾವ ದೇಶ, ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ, ಅಭಿವೃದ್ಧಿ ಕೆಲಸಗಳಿಗೆ ಸಾಲ ಮಾಡುವುದು ಅನಿವಾರ್ಯ ಎಂಬ ಸಂಗತಿಯನ್ನು ತಿಳಿಸಿರುವ ಅವರು, ಇತಿಮಿತಿಯಲ್ಲೇ ಸಾಲ ಮಾಡಲಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಕೇಂದ್ರದ ಸಾಲ 212 ಲಕ್ಷ ಕೋಟಿ ರೂಗೆ ಏರುವ ಅಂದಾಜು ಇದೆ. ಅದು ಜಿಡಿಪಿಯ ಶೇ. 55ಕ್ಕಿಂತ ಹೆಚ್ಚು. ತಾವು ಪರಿಮಿತಿಯಲ್ಲೇ ಸಾಲ ಮಾಡಿದ್ದೇವೆ ಎಂದಿದ್ದಾರೆ.
ನಾವು ಅಧಿಕಾರಕ್ಕೆ ಬಂದಾಗ ಸಾಲ 5.54 ಲಕ್ಷ ಕೋಟಿ ರೂ ಸಾಲ ಇತ್ತು. ಈಗ ಸಾಲ 8.14 ಲಕ್ಷ ಕೋಟಿ ರೂ ಆಗುತ್ತದೆ. ಫಿಸ್ಕಲ್ ರೆಸ್ಪಾನ್ಸಿಬಲ್ ಆ್ಯಕ್ಟ್ ಪ್ರಕಾರ ವಿತ್ತೀಯ ಕೊರತೆ ಜಿಡಿಪಿಯ ಶೇ.3ರ ಒಳಗೆ ಇರಬೇಕು. ಸಾಲವು ಶೇ. 25ರ ಒಳಗೆ ಇರಬೇಕು. ಕರ್ನಾಟಕದ ಜಿಡಿಇಪಿ ಮುಂಂದಿನ ವರ್ಷ 33 ಲಕ್ಷ ಕೋಟಿ ರೂ ಆಗುತ್ತದೆ. ಹೀಗಾಗಿ, ಕಾಯ್ದೆ ವಿಧಿಸಿರುವ ಮಿತಿಯೊಳಗೆಯೇ ಸಾಲ ಮಾಡಲಾಗದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಈ ವೇಳೆ ಸಿದ್ದರಾಮಯ್ಯ ಮತ್ತೆ ಆರೋಪ ಮಾಡಿದ್ದಾರೆ. ಜಿಎಸ್ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರ ನಾವು ಎರಡನೇ ಸ್ಥಾನದಲ್ಲಿದ್ದೇವೆ. ಆದರೆ, ಕರ್ನಾಟಕಕ್ಕೆ ಜಿಎಸ್ಟಿ ಪಾಲು ನ್ಯಾಯಯುತವಾಗಿ ಸಿಕ್ಕಿಲ್ಲ. ಈ ವರ್ಷ ನಮಗೆ ಜಿಎಸ್ಟಿ ಹಂಚಿಕೆಯಲ್ಲಿ 10,000 ಕೋಟಿ ರೂ ಕೊರತೆಯಾಗಿದೆ. ಮುಂದಿನ ವರ್ಷ 15,000 ಕೋಟಿ ರೂ ಕಡಿಮೆ ಆಗುವ ಅಂದಾಜು ಇದೆ. ಕಡಿಮೆ ಜಿಎಸ್ಟಿ ಸಿಕ್ಕಿದ್ದರಿಂದ ಕರ್ನಾಟಕದ ಬೆಳವಣಿಗೆ ಶೇ. 4 ಕಡಿಮೆ ಆಯಿತು. ಆದರೂ ಕೂಡ ಜಿಡಿಪಿ ಬೆಳವಣಿಗೆ ಶೇ. 8.10 ಇದೆ ಎಂದು ಮುಖ್ಯಮಂತ್ರಿಗಳು ವಿವರಿಸಿದ್ದಾರೆ.
ಇದನ್ನೂ ಓದಿ : ಕರ್ನಾಟಕ ಬಳಿಕ ಆಂಧ್ರದಲ್ಲೂ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್!



















