ಗುಬ್ಬಿ: ತಾಲೂಕಿನ ಕಸಬಾ ಹೋಬಳಿಯ ಜಿ. ಹೊಸಹಳ್ಳಿ ಗ್ರಾಪಂನಲ್ಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಸೂಚನೆ ಪರ್ಯಾಲೋಚನಾ ಸಭೆಯನ್ನು ಗ್ರಾಪಂ ಸದಸ್ಯರು ನಡೆಸಿದರು. ಆದರೆ, ಅದು ವಿಫಲವಾಯಿತು.
ಎಂಟು ಮಂದಿ ಸದಸ್ಯರು ಸಭೆಯಲ್ಲಿ ಭಾಗಿಯಾಗಿ ಉಳಿದ 13 ಜನರು ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ವಿಫಲವಾಗಿದೆ. ಜಿ. ಹೊಸಳ್ಳಿ ಗ್ರಾಪಂನಲ್ಲಿ ಒಟ್ಟು 21 ಸದಸ್ಯರಿದ್ದು ಅವಿಶ್ವಾಸ ನಿರ್ಣಯ ಪರ್ಯಾಯ ಲೋಚನ ಸಭೆಯನ್ನು ನಡೆಸುವುದಾಗಿ ಸದಸ್ಯರು ಚುನಾವಣಾ ಉಪವಿಭಾಗಾಧಿಕಾರಿ ನಹಿದಾ ಜಮ್ ಜಮ್ ಉಪಸ್ಥಿತಿಯಲ್ಲಿ ಸಭೆ ಏರ್ಪಡಿಸಿದ್ದರು. ಸಭೆಯಲ್ಲಿಎಂಟು ಸದಸ್ಯರು ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಈ ವೇಳೆ ಅಧ್ಯಕ್ಷೆ ಭಾಗ್ಯಮ್ಮ ನರಸಿಂಹಮೂರ್ತಿ ಮಾತನಾಡಿ, 13 ಸರ್ವ ಸದಸ್ಯರ ಬೆಂಬಲದಿಂದಾಗಿ ಅವಿಶ್ವಾಸ ನಿರ್ಣಯ ವಿಫಲವಾಗಿದ್ದು, ಇರುವ ಅಲ್ಪಾವಧಿಯಲ್ಲಿ ಉತ್ತಮ ಆಡಳಿತ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಗ್ರಾಪಂ ಸದಸ್ಯರುಗಳಾದ ನರೇಶ್, ವಿದ್ಯಾಸಾಗರ್, ಲೋಕೇಶ್, ಸುಶ್ಮಿತಾ ರಂಗೇಗೌಡ, ಸಿದ್ದಗಂಗಮ್ಮ, ರತ್ನಮ್ಮ, ಚನ್ನಿಗಪ್ಪ, ಮೋಹನ್, ಶಇವಾನಂಜಪ್ಪ, ಸಿದ್ದಗಂಗಮ್ಮ, ಗೌರಮ್ಮ ಸೇರಿದಂತೆ ಹಲವರು ಇದ್ದರು.



















