ಬೆಂಗಳೂರು: ಕಾಂಗ್ರೆಸ್ ನ್ನು ಹೇಗಾದರೂ ಮಾಡಿ ಇಕ್ಕಟ್ಟಿಗೆ ಸಿಲುಕಿಸಬೇಕೆಂದು ಪ್ರತಿಪಕ್ಷಗಳು ಹೋರಾಟ ಮಾಡುತ್ತಿವೆ. ಹೀಗಾಗಿ ಕಾಂಗ್ರೆಸ್ ಕೂಡ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದು, ಬಿಜೆಪಿ- ಜೆಡಿಎಸ್ ನಾಯಕರ ವಿರುದ್ಧದ ಪ್ರಕರಣಗಳ ವಿಚಾರದಲ್ಲಿ ಯಾವುದೇ ಮುಲಾಜು ಬೇಡ ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ ಎಂದು ತಿಳಿದು ಬಂದಿದೆ.
ಮುಡಾ, ವಾಲ್ಮೀಕಿ ನಿಗಮ ಹಗರಣ ಮುಂದಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಬಿಜೆಪಿ ಕೇಳುತ್ತಿದೆ. ಇದಕ್ಕೆ ಎಐಸಿಸಿ ಹೈಕಮಾಂಡ್ ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ಹೀಗಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣ ಕುರಿತು ಕಾನೂನು ಪ್ರಕ್ರಿಯೆ ಚುರುಕುಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ನಿವೇಶನ ಹಗರಣದಲ್ಲಿ ರಾಜ್ಯಪಾಲರ ಮಧ್ಯ ಪ್ರವೇಶ, ಬಿಜೆಪಿ -ಜೆಡಿಎಸ್ ಪಾದಯಾತ್ರೆ ಸೇರಿದಂತೆ ಎಲ್ಲ ಬೆಳವಣಿಗೆಗಳ ಕುರಿತು ಎಐಸಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಬಿಜೆಪಿ ನಾಯಕರ ವಿರುದ್ಧ ಪ್ರತ್ಯಸ್ತ್ರ ಪ್ರಯೋಗಿಸುವ ವಿಚಾರದಲ್ಲಿ ಮುಲಾಜು ಬೇಡ ಎಂದು ಸೂಚಿಸಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರತಿತಂತ್ರ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಯಡಿಯೂರಪ್ಪ ಕಾಂಗ್ರೆಸ್ ನ ಮೊದಲ ಟಾರ್ಗೆಟ್ ಆಗಿದ್ದಾರೆ.
ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣದಲ್ಲಿ ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಲು ಕಾನೂನು ಪ್ರಕ್ರಿಯೆ ಆರಂಭಿಸುವಂತೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರಿಗೆ ಸರ್ಕಾರ ಸೂಚಿಸಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜಭವನದಿಂದ ವ್ಯತಿರಿಕ್ತ ತೀರ್ಮಾನ ಹೊರಬಿದ್ದರೆ, ಯಡಿಯೂರಪ್ಪ ಪ್ರಕರಣದ ಗುರಾಣಿ ಸಿಗಲಿದೆ. ಈ ಮೂಲಕ ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಹಣಿದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆನ್ನುವುದು ಸುರ್ಜೇವಾಲಾ ಅವರ ಲೆಕ್ಕಾಚಾರ.
ಅಷ್ಟೇ ಎಲ್ಲ ದೋಸ್ತಿ ನಾಯಕರ ವಿರುದ್ಧದ ಎಲ್ಲ ಪ್ರಕರಣಗಳನ್ನು ಮುಂದಿಟ್ಟುಕೊಂಡು ಕಾನೂನು ಪ್ರಕ್ರಿಯೆ ಚುರುಕುಗೊಳಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಿಜೆಪಿ ಅಧಿಕಾರ ಅವಧಿಯ ಹಲವು ಹಗರಣಗಳ ಬಗ್ಗೆ ತನಿಖೆಗೆ ಆದೇಶ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ದೊಡ್ಡ ಕ್ರಾಂತಿಯೇ ಆಗಬಹುದು ಎನ್ನಲಾಗುತ್ತಿದೆ.