ಬೆಂಗಳೂರು : ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ ಆರಂಭವಾಗಲಿದ್ದು, ಹೊಸ ತೆರಿಗೆ ಕಾಯ್ದೆಯೂ ಜಾರಿಗೆ ಬರಲಿದೆ. ಇದರ ಬೆನ್ನಲ್ಲೇ, 2026-27ನೇ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆಯಲ್ಲಿ ಯಾವುದಾದರೂ ಬದಲಾವಣೆ ಇದೆಯೇ? ತೆರಿಗೆ ಸ್ಲ್ಯಾಬ್ ಗಳಲ್ಲಿ ಬದಲಾವಣೆ ಆಗಲಿದೆಯೇ ಎಂಬ ಪ್ರಶ್ನೆ ತುಂಬ ಜನರಲ್ಲಿ ಮೂಡುತ್ತಿದೆ. ಆದರೆ, 2026-27ನೇ ಹಣಕಾಸು ವರ್ಷದಲ್ಲೂ ತೆರಿಗೆ ಸ್ಲ್ಯಾಬ್ ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಹಳೆಯ ಹಾಗೂ ಹೊಸ ತೆರಿಗೆ ಸ್ಲ್ಯಾಬ್ ಗಳು ಹಾಗೆಯೇ ಮುಂದುವರಿಯಲಿವೆ ಎಂದು ಸರ್ಕಾರ ತಿಳಿಸಿದೆ.
ಹೊಸ ತೆರಿಗೆ ಪದ್ಧತಿಯ ಸ್ಲ್ಯಾಬ್ ಗಳು
4,00,000 ರೂ.: ಯಾವುದೇ ತೆರಿಗೆ ಇಲ್ಲ (0%)
4,00,001 ರೂ. – 8,00,000 ರೂ.: 5% ತೆರಿಗೆ
8,00,001 ರೂ. – 12,00,000 ರೂ.: 10% ತೆರಿಗೆ
12,00,001 ರೂ. – 16,00,000 ರೂ.: 15% ತೆರಿಗೆ
16,00,001 ರೂ. – 20,00,000 ರೂ.: 20% ತೆರಿಗೆ
20,00,000 ರೂ.ಗಿಂತ ಹೆಚ್ಚು: 30% ತೆರಿಗೆ
12.75 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಇಲ್ಲ
ಸಂಬಳ ಪಡೆಯುವ ಉದ್ಯೋಗಿಗಳಿಗೆ ಹೊಸ ತೆರಿಗೆ ಪದ್ಧತಿಯಲ್ಲಿ 75,000 ರೂ. ಪ್ರಮಾಣಿತ ಕಡಿತ ಲಭ್ಯವಿದೆ. ಸೆಕ್ಷನ್ 87A ಅಡಿಯಲ್ಲಿ ಸಿಗುವ ರಿಯಾಯಿತಿಯಿಂದಾಗಿ, ಕಡಿತಗಳ ನಂತರ 12 ಲಕ್ಷ ರೂ.ವರೆಗೆ ಆದಾಯ ಹೊಂದಿರುವವರು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಹೊಸ ತೆರಿಗೆ ಪದ್ಧತಿಯೇ ಈಗ ಡಿಫಾಲ್ಟ್ ಆಗಿದ್ದು, ಹಳೆಯ ಪದ್ಧತಿ ಬೇಕಾದವರು ಅದನ್ನು ಪ್ರತ್ಯೇಕವಾಗಿ ಆಯ್ದುಕೊಳ್ಳಬೇಕಾಗುತ್ತದೆ. ಹಳೆಯ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳದಿದ್ದರೆ, ಸ್ವಯಂಚಾಲಿತವಾಗ ಹೊಸ ತೆರಿಗೆ ಪದ್ಧತಿಯೇ ಅನ್ವಯವಾಗಲಿದೆ. ಸ್ಟಾಂಡರ್ಡ್ ಡಿಡಕ್ಷನ್ ಸೇರಿ ಒಟ್ಟು 12.75 ಲಕ್ಷ ರೂಪಾಯಿವರೆಗೆ ಆದಾಯ ಇರುವವರಿಗೆ ತೆರಿಗೆ ವಿನಾಯಿತಿ ಇರಲಿದೆ.
ಹಳೆಯ ತೆರಿಗೆ ಪದ್ಧತಿಯ ಸ್ಲ್ಯಾಬ್ ಗಳು
0 – 2,50,000 ರೂ.: ಯಾವುದೇ ತೆರಿಗೆ ಇಲ್ಲ
2,50,001 ರೂ.- 5,00,000 ರೂ.: 5% ತೆರಿಗೆ
5,00,001 ರೂ.- 10,00,000 ರೂ.: 20% ತೆರಿಗೆ
10,00,000 ರೂ.ಗಿಂತ ಹೆಚ್ಚು: 30% ತೆರಿಗೆ
ಹಳೆಯ ಪದ್ಧತಿಯಲ್ಲಿ ಡಿಡಕ್ಷನ್ಸ್ ಲಭ್ಯ
ಸಂಬಳ ಪಡೆಯುವ ನೌಕರರಿಗೆ ಹಳೆಯ ಪದ್ಧತಿಯಲ್ಲಿ 50 ಸಾವಿರ ರೂ. ಪ್ರಮಾಣಿತ ಕಡಿತ (ಸ್ಟಾಂಡರ್ಡ್ ಡಿಡಕ್ಷನ್) ಮುಂದುವರಿಯುತ್ತದೆ. ಈ ಪದ್ಧತಿಯಲ್ಲಿ ನೀವು 80 ಸಿ (ಎಲ್ಐಸಿ, ಪಿಪಿಎಫ್), 80 ಡಿ (ಆರೋಗ್ಯ ವಿಮೆ), ಎಚ್ ಆರ್ ಎ (ಮನೆ ಬಾಡಿಗೆ ಭತ್ಯೆ) ಮತ್ತು ಗೃಹ ಸಾಲದ ಬಡ್ಡಿ (ಸೆಕ್ಷನ್ 24ಬಿ) ಅಡಿಯಲ್ಲಿ ಕಡಿತಗಳನ್ನು ಪಡೆಯಬಹುದು. ಲೆಕ್ಕ ಹಾಕಲಾದ ಒಟ್ಟು ಆದಾಯ ತೆರಿಗೆಯ ಮೇಲೆ ಶೇ.4ರಷ್ಟು ಆರೋಗ್ಯ ಮತ್ತು ಶಿಕ್ಷಣ ಸೆಸ್ ಅನ್ವಯವಾಗುತ್ತದೆ.
ಇದನ್ನೂ ಓದಿ : ಕೆನಡಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯ ಬರ್ಬರ ಹತ್ಯೆ



















