ಕೋಟ/ಉಡುಪಿ : ವಿದೇಶಿ ಅಡಿಕೆ ಆಮದಿ ನಿಂದ ದೇಶಿ ಮಾರುಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು ದೇಶಿ ಅಡಿಕೆಯ ಬೆಲೆ ಕುಸಿತವಾಗುತ್ತಿದೆ ಎನ್ನುವ ಆತಂಕ ನಮ್ಮ ಅಡಿಕೆ ಬೆಳೆಗಾರರಲ್ಲಿದೆ. ಆದ್ದರಿಂದ ಈ ಬಗ್ಗೆ ಸ್ಪಷ್ಟನೆ ಬೇಕು ಎಂದು ಸಂಸತ್ತಿನಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಕೇಳಿದ ಪ್ರಶ್ನೆಗೆ ಅಡಿಕೆ ವಿದೇಶಿ ಆಮದಿನಿಂದ ದೇಶಿ ಮಾರುಕಟ್ಟೆ ಮೇಲೆ ಪ್ರತಿಕೂಲ ಪರಿಣಾಮವಿಲ್ಲ ಎಂದು ಕೇಂದ್ರ ವಾಣಿಜ್ಯ-ಕೈಗಾರಿಕೆ ಖಾತೆ ಸಚಿವರು ಸ್ಪಷ್ಟನೆ ನೀಡಿದ್ದು ಅಂಕಿ ಅಂಶದೊಂದಿಗೆ ವಿವರಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಮತ್ತು ಪ್ರಸ್ತುತ ವರ್ಷದಲ್ಲಿ ಶ್ರೀಲಂಕಾ, ಇಂಡೋನೇಷ್ಯಾ ಮತ್ತು ಇತರ ಆಗ್ನೆಯ ಏಷ್ಯಾದ ದೇಶಗಳಿಂದ ಅಡಿಕೆ ಆಮದು ನಡೆದಿದೆಯೇ ಹಾಗೂ ನಡೆದಿದ್ದರೆ ದೇಶೀಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆಯೇ ಎನ್ನುವ ಪೂಜಾರಿಯವರ ಪ್ರಶ್ನೆಗೆ ಉತ್ತರಿಸಿ, 2023-24ಕ್ಕೆ ಹೋಲಿಕೆ ಮಾಡಿದರೆ 2024-25ರಲ್ಲಿ ಆಮದು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಅದೇ ರೀತಿ ದೇಶದ ಅತೀ ಹೆಚ್ಚು ಅಡಿಕೆ ಉತ್ಪಾದಿಸುವ ರಾಜ್ಯಗಳಾದ ಕೇರಳದ ಕೋಝಿಕೋಡ್ ಹಾಗೂ ಕರ್ನಾಟಕದ ಶಿರಸಿಯಲ್ಲಿನ 2024-2025ನೇ ಸಾಲಿನ ಜೂನ್‌ನಲ್ಲಿನ ಅಡಿಕೆ ಬೆಲೆಯನ್ನು ಗಮನಿಸಿದರೆ ವರ್ಷದಿಂದ ವರ್ಷಕ್ಕೆ ಬೆಲೆ ಏರಿಕೆಯಾಗಿದೆ ಹೊರತು ಕುಸಿತವಾಗಿಲ್ಲ.
ಉದಾಹರಣೆಗೆ ಕೇರಳದ ಕೋಝಿಕೋಡ್‌ನಲ್ಲಿ 2024ರಲ್ಲಿ ಅಡಿಕೆ ಕ್ವಿಂಟಾಲ್ ಗರ 31,916 ರೂ. 2025 ರಲ್ಲಿ 32,388 . ಇದೆ. ಅದೇ ರೀತಿ ಶಿರಸಿಯಲ್ಲಿ 2024ರಲ್ಲಿ ಕ್ವಿಂಟಾಲ್‌ಗೆ 36,316 ರೂ. 2025 ರಲ್ಲಿ 37,856 ರೂ. ಇದೆ. ಈ ಅಂಶವನ್ನು ಗಮನಿಸಿದರೆ ವಿದೇಶಿ ಅಡಿಕೆ ಆಮದಿನಿಂದ ದೇಶಿಯ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿಲ್ಲ ಹಾಗೂ ರೈತರು ಆತಂಕಪಡುವ ಅಗತ್ಯವಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ವಾಣಿಜ್ಯ, ಕೈಗಾರಿಕೆ ಇಲಾಖೆ ಸ್ಪಷ್ಟಪಡಿಸಿದೆ.



















