ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ನಿತೀಶ್ ರಾಣಾ ಭರ್ಜರಿ ಅರ್ಧ ಶತಕ ಸಿಡಿಸುವುದರ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಆರ್ ಆರ್ 183 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 176 ರನ್ ಗಳಿಸಿ ಸೋಲು ಕಂಡಿದೆ. ಆದರೆ, ಆರ್ ಆರ್ ಗೆಲುವಿನಲ್ಲಿ ನಿತೀಶ್ ರಾಣಾ ಪಾತ್ರ ಹೆಚ್ಚಾಗಿದೆ. ಮೂರನೇ ಕ್ರಮಾಂಕದಲ್ಲಿ ಬಂದ ರಾಣಾ ಸಿಡಿಲಬ್ಬರದ ಇನ್ನಿಂಗ್ಸ್ ನೀಡಿದ್ದರು.
ರಾಜಸ್ಥಾನ್ ಆರಂಭಿಕ ಯಶಸ್ವಿ ಜೈಸ್ವಾಲ್ ಮೊದಲ ಓವರ್‌ನಲ್ಲಿ ಔಟಾದ ನಂತರ ಬಂದ ನಿತೀಶ್ ರಾಣಾ, ಕೇವಲ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಶತಕ ಗಳಿಸುವ ಸಮೀಪದಲ್ಲಿದ್ದಾಗ ಕ್ರೀಸ್ ಬಿಟ್ಟು ಮುಂದೆ ಹೋಗಿ ಔಟ್ ಆದರು.
ಚೆನ್ನೈ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ್ದ ನಿತೀಶ್ 36 ಎಸೆತಗಳಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್ ಗಳಿಂದ 81 ರನ್ ಗಳಿಸಿ ಔಟಾದರು.