ನವದೆಹಲಿ: ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಬಿಹಾರ ಮೂಲದ ಯುವ ನಾಯಕ ನಿತಿನ್ ನಬಿನ್ ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆ ಮೂಲಕ ಜೆ.ಪಿ. ನಡ್ಡಾ ಅವರ ಉತ್ತರಾಧಿಕಾರಿಯಾಗಿ 45 ವರ್ಷದ ನಬಿನ್ ಜವಾಬ್ದಾರಿ ವಹಿಸಿಕೊಂಡಿದ್ದು, ಬಿಜೆಪಿಯ ಇತಿಹಾಸದಲ್ಲಿಯೇ ಈ ಉನ್ನತ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಈ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯಿತು.
ಅಧಿಕಾರ ಸ್ವೀಕರಿಸುವ ಮುನ್ನ ನಿತಿನ್ ನಬಿನ್ ಅವರು ರಾಷ್ಟ್ರ ರಾಜಧಾನಿಯ ಪ್ರಮುಖ ಧಾರ್ಮಿಕ ಕೇಂದ್ರಗಳಾದ ಜಂಡೇವಾಲನ್ ದೇವಸ್ಥಾನ, ವಾಲ್ಮೀಕಿ ಮಂದಿರ, ಕನ್ನಾಟ್ ಪ್ಲೇಸ್‌ನ ಹನುಮಾನ್ ದೇವಾಲಯ ಮತ್ತು ಬಂಗ್ಲಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ನೂತನ ಅಧ್ಯಕ್ಷರಿಗೆ ಕೇಂದ್ರ ಗೃಹ ಸಚಿವಾಲಯವು ಈಗಾಗಲೇ ‘ಝೆಡ್’ ಕೆಟಗರಿ ಭದ್ರತೆಯನ್ನು ಒದಗಿಸಿದ್ದು, ಸಿಆರ್‌ಪಿಎಫ್ ಕಮಾಂಡೋಗಳ ರಕ್ಷಣೆಯಲ್ಲಿ ಅವರು ಪಕ್ಷದ ಕೇಂದ್ರ ಕಚೇರಿಗೆ ಆಗಮಿಸಿದರು. ಪ್ರಧಾನಿ ಮೋದಿ ಸೇರಿದಂತೆ ದಿಗ್ಗಜ ನಾಯಕರು ನಬಿನ್ ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೋಲಿಲ್ಲದ ಸರದಾರನಿಗೆ ಒಲಿದ ಪಟ್ಟ
ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರದಿಂದ ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ನಿತಿನ್ ನಬಿನ್, ಈವರೆಗೂ ಚುನಾವಣಾ ಕಣದಲ್ಲಿ ಸೋಲನ್ನೇ ಕಂಡಿಲ್ಲ. ದಿವಂಗತ ಬಿಜೆಪಿ ನಾಯಕ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಪುತ್ರರಾದ ಇವರು, ಸಂಘಟನಾತ್ಮಕವಾಗಿ ಪಕ್ಷವನ್ನು ಬಲಪಡಿಸುವಲ್ಲಿ ನಿಪುಣರೆಂದು ಹೆಸರುವಾಸಿಯಾಗಿದ್ದಾರೆ. 2006ರ ಉಪಚುನಾವಣೆಯಿಂದ ಆರಂಭಿಸಿ ಕಳೆದ ವರ್ಷದ ಚುನಾವಣೆಯವರೆಗೂ ಬೃಹತ್ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾ ಬಂದಿರುವ ಇವರು, ಬಿಹಾರ ಸರ್ಕಾರದಲ್ಲಿ ರಸ್ತೆ ನಿರ್ಮಾಣ ಮತ್ತು ನಗರಾಭಿವೃದ್ಧಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
ಛತ್ತೀಸ್‌ಗಢ ವಿಜಯೋತ್ಸವದ ರೂವಾರಿ
ನಿತಿನ್ ನಬಿನ್ ಅವರಿಗೆ ರಾಷ್ಟ್ರೀಯ ಮಟ್ಟದ ಜವಾಬ್ದಾರಿ ನೀಡಲು ಅವರು ಛತ್ತೀಸ್‌ಗಢದಲ್ಲಿ ತೋರಿದ ಅದ್ಭುತ ಸಂಘಟನಾ ಚಾತುರ್ಯವೇ ಪ್ರಮುಖ ಕಾರಣ ಎನ್ನಲಾಗಿದೆ. 2023ರ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸಹ-ಪ್ರಭಾರಿಯಾಗಿದ್ದ ನಬಿನ್, ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದರ ಮುಂದುವರಿದ ಭಾಗವಾಗಿ 2024ರ ಲೋಕಸಭಾ ಚುನಾವಣೆಯಲ್ಲೂ ಛತ್ತೀಸ್‌ಗಢದ 11 ಸ್ಥಾನಗಳ ಪೈಕಿ 10ರಲ್ಲಿ ಬಿಜೆಪಿ ಜಯಭೇರಿ ಬಾರಿಸುವಂತೆ ನೋಡಿಕೊಂಡಿದ್ದರು. ಆರ್‌ಎಸ್‌ಎಸ್ ಹಿನ್ನೆಲೆ ಹೊಂದಿರುವ ಇವರು ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುವ ಯುವ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ : ಕಚೇರಿಯಲ್ಲೇ ಡಿಜಿಪಿ ರಾಮಚಂದ್ರರಾವ್ ರಾಸಲೀಲೆ | ವರದಿ ನೀಡುವಂತೆ ಗೃಹ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ



















