75 ವರ್ಷ ತುಂಬಿದ ಬಳಿಕ ಬಿಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದ ಬಿಜೆಪಿ ಈಗ ನರೇಂದ್ರ ಮೋದಿ ವಿಚಾರದಲ್ಲೂ ಮೋಹನ್ ಭಾಗವತ್ ಅವರ ಆಶಯದಂತೆ ನಡೆದುಕೊಳ್ಳಲಿ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಈ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು 75 ವರ್ಷ ತುಂಬಿದ ನಂತರ ರಾಜೀನಾಮೆ ನೀಡಿದರೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಧಾನಿಯಾಗಲಿ ಎಂದು ಹೇಳಿದರು. 75 ವರ್ಷ ತುಂಬಿದವರು ಅಧಿಕಾರದಿಂದ ಕೆಳಗಿಳಿಯಬೇಕು ಎನ್ನುವ ಮೋಹನ್ ಭಾಗವತ್ ಅವರ ನಿಲುವನ್ನು ಸ್ವಾಗತಿಸುತ್ತೇನೆ ‘ಪ್ರಧಾನಿ ಮೋದಿ ಅಧಿಕಾರದಿಂದ ಕೆಳಗಿಳಿದರೆ ಸಚಿವ ನಿತಿನ್ ಗಡ್ಕರಿ ದೇಶದ ಮುಂದಿನ ಪ್ರಧಾನಿಯಾಗಬೇಕು. ಏಕೆಂದರೆ ಗಡ್ಕರಿ ಅವರಿಗೆ ದೇಶದ ಸಾಮಾನ್ಯ ಜನರ ಬಗ್ಗೆ ಕಾಳಜಿ ಇದೆ’ ಎಂದು ಹೇಳಿದರು.



















