ಬೆಂಗಳೂರು: ನಿಸ್ಸಾನ್ ಮ್ಯಾಗ್ನೈಟ್ ಎಸ್ಯುವಿಯ ಹೊಸ CNG ವೇರಿಯಂಟ್ ಏಪ್ರಿಲ್ 2025ರೊಳಗೆ ಲಭ್ಯವಾಗಲಿದೆ. ಇದು ಡೀಲರ್-ಮಟ್ಟದ ಆಕ್ಸೆಸರಿ ಕಿಟ್ ರೂಪದಲ್ಲಿ ಬರಲಿದೆ ಎಂದು ಮೂಲಗಳು ತಿಳಿಸಿವೆ. ಇದು ನಿಸ್ಸಾನ್‌ನ ಸಿಸ್ಟರ್ ಕಾರು ರೆನಾಲ್ಟ್ ಕೈಗರ್‌ಗೆ ಡೀಲರ್-ಮಟ್ಟದ ಸಿಎನ್ಜಿ ಕಿಟ್ ಲಭ್ಯವಾದ ಕೆಲವು ದಿನಗಳ ಬಳಿಕವೇ ಪ್ರಕಟವಾಗುತ್ತಿದೆ. ರೆನಾಲ್ಟ್ ಕ್ವಿಡ್ ಮತ್ತು ಟ್ರೈಬರ್‌ಗೂ ಇದೇ ರೀತಿಯ ಕಿಟ್ ಕಿಟ್ ನೀಡಲಾಗಿದೆ.
ಮೂಲಗಳ ಪ್ರಕಾರ, ಕೇವಲ 1.0 ಲೀಟರ್ ನ್ಯಾಚುರಲಿ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಮ್ಯಾನುಯಲ್ ಗೇರ್‌ಬಾಕ್ಸ್ ಮಾದರಿಯಷ್ಟೇ CNG ಕಿಟ್ ಜೊತೆಗೆ ಲಭ್ಯವಾಗಲಿದೆ. ಇದು ರೆನಾಲ್ಟ್ ಕಿಗರ್ ಸಿಎನ್ಜಿಯಂತಹದ್ದೇ ಆಗಿರಲಿದೆ. ಮ್ಯಾಗ್ನೈಟ್ ಸಿಎನ್ಜಿ ಮಾದರಿಯು 18-22 ಕಿಮೀ ಪ್ರತಿಕಿಲೋಗ್ರಾಂ ಮೈಲೇಜ್ ನೀಡುವ ನಿರೀಕ್ಷೆಯಿದೆ. ಆದರೆ CNG ಕಿಟ್ ಜೊತೆಗೆ ಎಂಜಿನ್ ಪವರ್ ಮತ್ತು ಟಾರ್ಕ್ ಗಳ ವಿವರಗಳು ಇನ್ನೂ ಲಭ್ಯವಾಗಿಲ್ಲ.
ನಿಸ್ಸಾನ್ ಮ್ಯಾಗ್ನೈಟ್ CNG ವಾರಂಟಿ ಮತ್ತು ಬೆಲೆ
ಮ್ಯಾಗ್ನೈಟ್ CNG ಮಾದರಿಗೂ ನಿಸ್ಸಾನ್ ಕಂಪನಿಯು ಸಾಮಾನ್ಯ SUV ಮಾದರಿಗಳಿಗೆ ನೀಡುವಂತೆ 3 ವರ್ಷ ಅಥವಾ 1,00,000 ಕಿಮೀ (ಯಾವುದೇ ಮೊದಲು ತಲುಪಿದರೂ) ಸ್ಟ್ಯಾಂಡರ್ಡ್ ವಾರಂಟಿ ಒದಗಿಸಲಿದೆ. ಡೀಲರ್‌ಗಳಿಂದ CNG ಕಿಟ್‌ಗಾಗಿ ಹೆಚ್ಚುವರಿ 1 ವರ್ಷದ ವಾರಂಟಿಯೂ ಲಭ್ಯವಿರುತ್ತದೆ. ಜೊತೆಗೆ, RC (ರಿಜಿಸ್ಟ್ರೇಷನ್ ಸರ್ಟಿಫಿಕೇಟ್) ಅಪ್ಡೇಟ್ಗಳನ್ನು ಡೀಲರ್‌ಗಳು ಮಾಡಿಕೊಡಲಿದ್ದಾರೆ.
ರೆನಾಲ್ಟ್ ಕೈಗರ್‌ನ CNG ಕಿಟ್ ಅಂದಾಜು 79,500 ರೂಪಾಯಿ ಬೆಲೆ ಹೊಂದಿದೆ. ಮ್ಯಾಗ್ನೈಟ್ CNGಗೂ ಇದೇ ರೀತಿ ಹೆಚ್ಚುವರಿ ವೆಚ್ಚ ಇರುವ ಸಾಧ್ಯತೆ ಇದೆ. ಈ CNG ಕಿಟ್‌ಗಳನ್ನು Uno Minda Group ಪೂರೈಸಲಿದೆ. ಆದರೆ, ಎಲ್ಲಾ ವೇರಿಯಂಟ್‌ಗಳಿಗೆ ಇದು ಲಭ್ಯವಿರಬಹುದಾ ಅಥವಾ ಆಯ್ಕೆಮಾಡಿದ ಕೆಲವೇ ಟ್ರಿಮ್‌ಗಳಿಗೆ ಮಾತ್ರ ನೀಡಲಾಗುತ್ತದೆಯಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಭಾರತದಲ್ಲಿ CNG ವಾಹನಗಳ ಜನಪ್ರಿಯತೆ
ಸಿಎನ್ಜಿ ವಿಚಾರಕ್ಕೆ ಬಂದಾಗ ಮಾರುತಿ ಸುಜುಕಿಯು 71.60% ಮಾರುಕಟ್ಟೆ ಪಾಲು ಪಡೆದು ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ
Vahan ಪೋರ್ಟಲ್‌ನಿಂದ ಪಡೆದ ಚಿಲ್ಲರೆ ಮಾರಾಟದ ಡೇಟಾ ಪ್ರಕಾರ, ಕಳೆದ ವರ್ಷ ಭಾರತದಲ್ಲಿ ಒಟ್ಟು 7,15,213 CNG ಚಾಲಿತ ಪ್ಯಾಸೆಂಜರ್ ಕಾರುಗಳು ಮಾರಾಟವಾಗಿದ್ದು, ಇದು ವರ್ಷ 35% ಶೇಕಡಾ ಬೆಳವಣಿಗೆಯಾಗಿದೆ. ಮಾರುತಿ ಸುಜುಕಿ, CNG ಮಾದರಿಗಳಲ್ಲಿ 71.60% ಮಾರುಕಟ್ಟೆ ಪಾಲುಪಡೆದಿದ್ದು. ಈ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ. ಟಾಟಾ ಮೋಟಾರ್ಸ್ 16.13% ಮತ್ತು ಹ್ಯುಂಡೈ 10.04% ಮಾರುಕಟ್ಟೆ ಪಾಲು ಪಡೆದಿದೆ. ಟೊಯೋಟಾ 2.21% ಪಾಲನ್ನು ಹೊಂದಿದೆ.
CNG ವಾಹನಗಳ ಜನಪ್ರಿಯತೆ ಹೆಚ್ಚುತ್ತಿರುವುದರಿಂದ, ಹೋಂಡಾ ಮತ್ತು ರೆನಾಲ್ಟ್ ಡೀಲರ್-ಮಟ್ಟದ CNG ಕಿಟ್‌ಗಳನ್ನು ಪ್ರಾರಂಭಿಸಿದ್ದು, ನಿಸ್ಸಾನ್ ಕೂಡ ಇದನ್ನು ಅನುಸರಿಸುತ್ತಿದೆ. CNG ವೇರಿಯಂಟ್ ಕಾಂಪಾಕ್ಟ್ SUVಗೆ ಗ್ರಾಹಕರನ್ನು ಆಕರ್ಷಿಸಬಹುದಾದ ನಿರೀಕ್ಷೆಯಿದೆ.