ಉದಯ್‌ಪುರ : ನಿಸ್ಸಾನ್ ಮೋಟಾರ್ ಇಂಡಿಯಾ ತನ್ನ ಬಹುನಿರೀಕ್ಷಿತ 7 ಸೀಟರ್ ಕಾಂಪ್ಯಾಕ್ಟ್ ಎಂಪಿವಿ ಕಾರು ‘ನಿಸ್ಸಾನ್ ಗ್ರಾವೈಟ್‘ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 5.65 ಲಕ್ಷ ರೂಪಾಯಿ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಿರುವ ಈ ಕಾರು, ನೇರವಾಗಿ ರೆನಾಲ್ಟ್ ಟ್ರೈಬರ್ ಕಾರಿಗೆ ಪೈಪೋಟಿ ನೀಡಲಿದೆ.

ನಿಸ್ಸಾನ್ ಮ್ಯಾಗ್ನೈಟ್ ನಂತರ ಕಂಪನಿಯ ಎರಡನೇ ಪ್ರಮುಖ ಕಾರು ಇದಾಗಿದ್ದು, ಚೆನ್ನೈನಲ್ಲಿರುವ ರೆನಾಲ್ಟ್-ನಿಸ್ಸಾನ್ ಅಲಯನ್ಸ್ ಪ್ಲ್ಯಾಂಟ್ನಲ್ಲಿ ಇದನ್ನು ತಯಾರಿಸಲಾಗಿದೆ. ಭಾರತೀಯ ಕುಟುಂಬಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ.
ವಿನ್ಯಾಸ ಮತ್ತು ವೈಶಿಷ್ಟ್ಯಗಳು
ರೆನಾಲ್ಟ್ ಟ್ರೈಬರ್ ಪ್ಲಾಟ್‌ಫಾರ್ಮ್ ಆಧಾರಿತವಾಗಿದ್ದರೂ, ಗ್ರಾವಿಟ್ ವಿಶಿಷ್ಟ ವಿನ್ಯಾಸ ಹೊಂದಿದೆ. ಬೋಲ್ಡ್ ಪಿಯಾನೋ ಬ್ಲ್ಯಾಕ್ ಗ್ರಿಲ್, ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಡಿಆರ್‌ಎಲ್‌ಗಳು (DRL) ಮತ್ತು 16 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್‌ಗಳು ಕಾರಿನ ಅಂದವನ್ನು ಹೆಚ್ಚಿಸಿವೆ. 5 ಆಕರ್ಷಕ ಬಣ್ಣಗಳಲ್ಲಿ (ಫಾರೆಸ್ಟ್ ಗ್ರೀನ್, ಒನಿಕ್ಸ್ ಬ್ಲ್ಯಾಕ್, ಬ್ಲೇಡ್ ಸಿಲ್ವರ್, ಸ್ಟಾರ್ಮ್ ವೈಟ್, ಮೆಟಾಲಿಕ್ ಗ್ರೇ) ಕಾರು ಲಭ್ಯವಿದೆ.

ಒಳಾಂಗಣ ಮತ್ತು ಸುರಕ್ಷತೆ
ಗ್ರಾವಿಟ್ ಕಾರಿನಲ್ಲಿ ಮಾಡ್ಯುಲರ್ ಸೀಟಿಂಗ್ ವ್ಯವಸ್ಥೆ ಇದ್ದು, 3ನೇ ಸಾಲಿನ ಸೀಟುಗಳನ್ನು ಸಂಪೂರ್ಣವಾಗಿ ತೆಗೆಯಬಹುದು. 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ವೈರ್‌ಲೆಸ್ ಚಾರ್ಜರ್, ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ಹೈಟೆಕ್ ಫೀಚರ್‌ಗಳಿವೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ , ಹಿಲ್ ಸ್ಟಾರ್ಟ್ ಅಸಿಸ್ಟ್ ಸೇರಿದಂತೆ 30ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಲಾಗಿದೆ.
ಎಂಜಿನ್ ಮತ್ತು ಮೈಲೇಜ್
1.0 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಗ್ರಾವಿಟ್, 72PS ಪವರ್ ಮತ್ತು 96Nm ಟಾರ್ಕ್ ಉತ್ಪಾದಿಸುತ್ತದೆ. 5 ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‌ಬಾಕ್ಸ್ ಆಯ್ಕೆಗಳಿದ್ದು, ಪ್ರತಿ ಲೀಟರ್‌ಗೆ 19 ಕಿ.ಮೀಗೂ ಹೆಚ್ಚು ಮೈಲೇಜ್ ನೀಡಲಿದೆ ಎಂದು ಕಂಪನಿ ತಿಳಿಸಿದೆ.
ಬೆಲೆ ವಿವರ (ಎಕ್ಸ್ ಶೋರೂಂ):
- VISIA: 5.65 ಲಕ್ಷ ರೂಪಾಯಿ
- ACENTA: 6.59 ಲಕ್ಷ ರೂಪಾಯಿ
- N-CONNECTA: 7.20 ಲಕ್ಷ ರೂಪಾಯಿ
- TEKNA: 7.91 ಲಕ್ಷ ರೂಪಾಯಿ
ಸೀಮಿತ ಅವಧಿಗೆ ‘ಲಾಂಚ್ ಎಡಿಷನ್’ ಕೂಡ ಲಭ್ಯವಿದ್ದು, ಇದರಲ್ಲಿ ಜೆಬಿಎಲ್ ಸ್ಪೀಕರ್‌ಗಳು, ಡ್ಯಾಶ್ ಕ್ಯಾಮ್, ಏರ್ ಪ್ಯೂರಿಫೈಯರ್ ಮುಂತಾದ ಹೆಚ್ಚುವರಿ ಸೌಲಭ್ಯಗಳು ಸಿಗಲಿವೆ.
ಇದನ್ನೂ ಓದಿ : ಮಾರುತಿ ಸುಜುಕಿಯಿಂದ ಎಲೆಕ್ಟ್ರಿಕ್ ಎಸ್‌ಯುವಿ ‘ಇ-ವಿಟಾರಾ’ ಬಿಡುಗಡೆ | ಬೆಲೆ ಎಷ್ಟು ಗೊತ್ತಾ?



















