ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಅಮೆರಿಕದ ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ನಿಸಾರ್ (NISAR – Nasa-Isro Synthetic Aperture Radar) ಉಪಗ್ರಹವು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಒಂದು ಹೊಸ ಮೈಲಿಗಲ್ಲಾಗಲಿದೆ. ಈ ಉಪಗ್ರಹವನ್ನು ಇದೇ ಜುಲೈ 30ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್‌ಎಲ್‌ವಿ ಎಂಕೆ-2 ರಾಕೆಟ್ ಮೂಲಕ ಉಡಾವಣೆಗೆ ಸಜ್ಜಾಗಿದೆ. ಇದು ಕೇವಲ ಮತ್ತೊಂದು ಭೂಪರಿವೀಕ್ಷಣಾ ಉಪಗ್ರಹವಲ್ಲ, ಬದಲಾಗಿ ಜಗತ್ತು ಹಿಂದೆಂದೂ ಕಂಡಿರದ ತಾಂತ್ರಿಕ ಅದ್ಭುತವಾಗಿದೆ.
ನಿಸಾರ್ ಉಪಗ್ರಹದ ವಿಶೇಷತೆಗಳೇನು?
ನಿಸಾರ್, ಭೂಮಿಯಿಂದ 747 ಕಿ.ಮೀ ಎತ್ತರದ ಕಕ್ಷೆಯಲ್ಲಿ ಸ್ಥಾಪನೆಯಾಗಲಿದ್ದು, ಪ್ರತಿದಿನ 14 ಬಾರಿ ಭೂಮಿಯನ್ನು ಸುತ್ತಲಿದೆ. ಕೇವಲ 97 ನಿಮಿಷಗಳಲ್ಲಿ ಒಂದು ಸುತ್ತು ಪೂರ್ಣಗೊಳಿಸುವ ಇದು, 12 ದಿನಗಳಲ್ಲಿ ಭೂಮಿಯ ಪ್ರತಿಯೊಂದು ಭಾಗವನ್ನು ಸಂಪೂರ್ಣವಾಗಿ ಮ್ಯಾಪ್ ಮಾಡಲಿದೆ.

ದ್ವಿ-ತರಂಗಾಂತರ ರಾಡಾರ್: ಈ ಉಪಗ್ರಹವು ವಿಶ್ವದಲ್ಲೇ ಮೊದಲ ಬಾರಿಗೆ ಎರಡು ರೀತಿಯ ತರಂಗಾಂತರಗಳನ್ನು ಹೊಂದಿರುವ ಸಿಂಥೆಟಿಕ್ ಅಪರ್ಚರ್ ರಾಡಾರ್ (SAR) ತಂತ್ರಜ್ಞಾನವನ್ನು ಹೊಂದಿದೆ. ನಾಸಾ ನಿರ್ಮಿತ ಎಲ್-ಬ್ಯಾಂಡ್ ಮತ್ತು ಇಸ್ರೋ ನಿರ್ಮಿತ ಎಸ್-ಬ್ಯಾಂಡ್ ರಾಡಾರ್‌ಗಳು ಇದರಲ್ಲಿವೆ. ಈ ಸಂಯೋಜನೆಯು ಮೋಡಗಳು, ದಟ್ಟವಾದ ಕಾಡುಗಳು, ಹೊಗೆ ಮತ್ತು ಸಂಪೂರ್ಣ ಕತ್ತಲಲ್ಲೂ ಭೂಮಿಯನ್ನು ಸ್ಪಷ್ಟವಾಗಿ “ನೋಡಲು” ಅನುವು ಮಾಡಿಕೊಡುತ್ತದೆ.
ನಿಖರವಾದ ಕಣ್ಗಾವಲು: ಇದು ಭೂಮಿಯ ಮೇಲ್ಮೈಯಲ್ಲಿ ಆಗುವ ಅತಿ ಸಣ್ಣ ಬದಲಾವಣೆಗಳನ್ನು, ಅಂದರೆ ಕೆಲವೇ ಮಿಲಿಮೀಟರ್‌ಗಳಷ್ಟು ಚಲನೆಯನ್ನೂ ಪತ್ತೆಹಚ್ಚಬಲ್ಲದು. ಇಂಟರ್‌ಫೆರೋಮೆಟ್ರಿಕ್ ಸಿಂಥೆಟಿಕ್ ಅಪರ್ಚರ್ ರಾಡಾರ್ (InSAR) ಎಂಬ ವಿಶೇಷ ತಂತ್ರಜ್ಞಾನ ಬಳಸುವ ಮೂಲಕ ಈ ಕೆಲಸವನ್ನು ನಿಸಾರ್ ಮಾಡಲಿದೆ.
ಬೃಹತ್ ಆ್ಯಂಟೆನಾ: ಬಾಹ್ಯಾಕಾಶಕ್ಕೆ ಉಡಾವಣೆಗೊಳ್ಳಲಿರುವ ಅತಿದೊಡ್ಡ ರಾಡಾರ್ ಇಮೇಜಿಂಗ್ ಆ್ಯಂಟೆನಾ ಇದಾಗಿದ್ದು, 12-ಮೀಟರ್ ಅಗಲದ ಚಿನ್ನದ ಲೇಪನವುಳ್ಳ ಆ್ಯಂಟೆನಾವನ್ನು ಹೊಂದಿದೆ.
ಜಗತ್ತಿಗೆ ನಿಸಾರ್ ಏಕೆ ಅಗತ್ಯ?
ಭೂಮಿಯ ಮೇಲಿನ ಕ್ಷಿಪ್ರ ಬದಲಾವಣೆಗಳನ್ನು ಗ್ರಹಿಸಲು ಸಾಂಪ್ರದಾಯಿಕ ಉಪಗ್ರಹಗಳು ವಿಫಲವಾಗುತ್ತಿವೆ. ನಿಸಾರ್ ಈ ಅಂತರವನ್ನು ತುಂಬಲಿದೆ.
ಹವಾಮಾನ ಬದಲಾವಣೆ: ಧ್ರುವ ಪ್ರದೇಶದ ಹಿಮ ಕರಗುವಿಕೆ, ಹಿಮನದಿಗಳ ಚಲನೆ ಮತ್ತು ಶಾಶ್ವತವಾಗಿ ಹೆಪ್ಪುಗಟ್ಟಿದ ನೆಲ ಕರಗುವುದನ್ನು ಇದು ನಿಖರವಾಗಿ ಗಮನಿಸಲಿದೆ.
ವಿಪತ್ತು ನಿರ್ವಹಣೆ: ಭೂಕುಸಿತದ ಅಪಾಯ, ಭೂಕಂಪದ ಮುನ್ಸೂಚನೆಗಾಗಿ ಭೂಮಿಯ ಚಲನೆಯನ್ನು ಪತ್ತೆ ಹಚ್ಚುತ್ತದೆ.
ಕೃಷಿ ಮತ್ತು ಜಲ ಭದ್ರತೆ: ಬೆಳೆಗಳ ಇಳುವರಿಯ ಕುರಿತು ಮುನ್ಸೂಚನೆ ನೀಡುವುದು, ಮಣ್ಣಿನ ತೇವಾಂಶವನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಅಂತರ್ಜಲ ಮಟ್ಟವನ್ನು ಮ್ಯಾಪ್ ಮಾಡುತ್ತದೆ.

ಪರಿಸರ ಮತ್ತು ಅರಣ್ಯ: ಅರಣ್ಯನಾಶ, ಅರಣ್ಯದ ಜೀವರಾಶಿ ಮತ್ತು ಇಂಗಾಲ ಸಂಗ್ರಹಣೆಯ ಸಾಮರ್ಥ್ಯವನ್ನು ಅಳೆಯಲು ಸಹಾಯ ಮಾಡುತ್ತದೆ.
ಇಸ್ರೋ-ನಾಸಾ ವೆಚ್ಚ ಮಾಡಿದ್ದೆಷ್ಟು?
ನಿಸಾರ್ ಇದುವರೆಗೆ ಕೈಗೊಂಡಿರುವ ಅತ್ಯಂತ ದುಬಾರಿ ಭೂ ಪರಿವೀಕ್ಷಣಾ ಯೋಜನೆಗಳಲ್ಲಿ ಒಂದಾಗಿದೆ, ಇದರ ಒಟ್ಟು ವೆಚ್ಚ ಸುಮಾರು 12,500 ಕೋಟಿ ರೂಪಾಯಿಗಳು(1.5 ಬಿಲಿಯನ್ ಡಾಲರ್). ಈ ಪೈಕಿ ನಾಸಾ 10 ಸಾವಿರ ಕೋಟಿ ರೂ. ಕೊಡುಗೆ ನೀಡಿದೆ. ಇಸ್ರೋ ಸುಮಾರು 788 ಕೋಟಿ ರೂ. ಕೊಡುಗೆ ನೀಡಿದೆ. ಈ ಯೋಜನೆಯಿಂದ ಲಭ್ಯವಾಗುವ ಎಲ್ಲಾ ಡೇಟಾವನ್ನು ವಿಶ್ವಾದ್ಯಂತ ಸಂಶೋಧಕರು ಮತ್ತು ಸರ್ಕಾರಗಳಿಗೆ ಉಚಿತವಾಗಿ ಲಭ್ಯವಾಗಿಸಲಾಗುವುದು ಎಂದು ಇಸ್ರೋ ಹೇಳಿದೆ.