ರಾಮನಗರ: ನನ್ನನ್ನು ಸೋಲಿಸಲು ಇಡೀ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ. ವರ್ಷಕ್ಕೊಮ್ಮೆ ಪಕ್ಷಾಂತರ ಮಾಡುವವರಿಗೆ ಟಿಕೆಟ್ ಕೊಟ್ಟು ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗುಡುಗಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕನ್ನಿದೊಡ್ಡಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಡಿಕೆಶಿ ಅವರ ಸಹೋದರ ಸಂಸದರಾಗಿದ್ದರೂ ಯಾವುದೇ ಕೆಲಸಗಳು ನಡೆದಿಲ್ಲ. ಜನರನ್ನು ಹೆದರಿಸಿ ಬೆದರಿಸಿ ವೋಟ್ ಪಡೆಯುತ್ತಿದ್ದರು. ನಾವು ಇದನ್ನು ವಿರೋಧಿಸಿ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದೇವು. ಹೀಗಾಗಿಯೇ ಅವರ ಟಾರ್ಗೆಟ್ ದೇವೇಗೌಡರು ಮತ್ತು ಕುಮಾರಸ್ವಾಮಿ ಈಗ ನಿಖಿಲ್ ಕುಮಾರಸ್ವಾಮಿ ಎಂದು ಹೇಳಿದ್ದಾರೆ.
ನಾನು ಯೋಗೇಶ್ವರ್ ಸತ್ತರೆ ಇಲ್ಲೇ ಮಣ್ಣಾಗುತ್ತೇವೆ ಎಂಬ ಡಿ.ಕೆ ಶಿವಕುಮಾರ್ ಹೇಳಿಕೆಯ ವಿಚಾರವಾಗಿ ಮಾತನಾಡಿರುವ ನಿಖಿಲ್, ಯಾರು ಸಾಯುವುದು ಬೇಡ. ಎಲ್ಲರೂ ನೂರಾರು ವರ್ಷ ಬದುಕಲಿ. ನಾನು ಇಂತಹ ಮಾತುಗಳಿಂದ ಟ್ರಿಗರ್ ಆಗುವುದಿಲ್ಲ. ನಾನು ಯಾವತ್ತೂ ಆಗಿಲ್ಲ. ಮುಂದೆಯೂ ಆಗಲ್ಲ. ಜನರು ಕುಮಾರಸ್ವಾಮಿಗೆ ಮತ್ತೊಮ್ಮೆ ಆಶೀರ್ವಾದ ಮಾಡಬೇಕು ಎಂದು ನಿರ್ಧರಿಸಿದ್ದಾರೆ. ಹೀಗಾಗಿ ನನ್ನ ಗೆಲುವು ನಿಶ್ಚಿತ ಎಂದಿದ್ದಾರೆ.