ಬೆಂಗಳೂರು: ಜೆರೋಧಾ ಸಹ ಸಂಸ್ಥಾಪಕರಾದ ನಿಖಿಲ್ ಕಾಮತ್ ಮತ್ತು ನಿತಿನ್ ಕಾಮತ್ ಅವರು ತಮ್ಮ ತಾಯಿ ರೇವತಿ ಕಾಮತ್ ಅವರಿಗೆ ಹೊಚ್ಚ ಹೊಸ ಮರ್ಸಿಡಿಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕುರಿತು ಸ್ವತಃ ರೇವತಿಯವರೇ ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, “ನನ್ನ ಮಕ್ಕಳು ಇಂದು ನನಗೆ ಹೊಸ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಾರು ಕೀಗಳನ್ನು ಕೊಡುವುದರ ಜೊತೆಗೆ ಒಂದು ಪೇಟಾ ಮತ್ತು ಶಾಲನ್ನೂ ತೊಡಿಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಇದರ ಫೋಟೋ ಈಗ ವೈರಲ್(Viral News) ಆಗಿದೆ. ನಿಖಿಲ್-ನಿತಿನ್ ಸಹೋದರರು ಅಮ್ಮನಿಗೆ ನೀಡಿದ ಈ ಸರ್‌ಪ್ರೈಸ್ ಉಡುಗೊರೆ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೇವತಿ ಕಾಮತ್ ಅವರು ಸಂತೋಷದಿಂದ ಕಾರಿನ ಕೀಗಳನ್ನು ಸ್ವೀಕರಿಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ ಗೌರವ ಮತ್ತು ಘನತೆಯನ್ನು ಪ್ರತಿಪಾದಿಸುವ ಸಾಂಪ್ರದಾಯಿಕ ಪೇಟಾ ಮತ್ತು ಶಾಲು ಹಾಕುವ ಮೂಲಕ ಇದಕ್ಕೂ ಸಾಂಸ್ಕೃತಿಕ ಸ್ಪರ್ಶ ನೀಡಿರುವುದು ಸಂತಸ ತಂದಿದೆ ಎಂದಿದ್ದಾರೆ.
ಮರ್ಸಿಡಿಸ್ ಜಿಎಲ್ಎಸ್ ಕಾರು ಇದಾಗಿದ್ದು, ಈ ಐಷಾರಾಮಿ ಎಸ್‌ಯುವಿ ಬೆಲೆ 1.5 ಕೋಟಿ ರೂ. ವಿಶಾಲವಾದ ಮತ್ತು ಅಲ್ಟ್ರಾ-ಐಷಾರಾಮಿ ಕ್ಯಾಬಿನ್, ಅತ್ಯಾಧುನಿಕ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಶಕ್ತಿಯುತ ಎಂಜಿನ್ ಸೇರಿದಂತೆ ಉನ್ನತ ಶ್ರೇಣಿಯ ವೈಶಿಷ್ಟ್ಯಗಳಿಂದಾಗಿ ಜಿಎಲ್ಎಸ್ ಅನ್ನು ‘ಎಸ್-ಕ್ಲಾಸ್ ಆಫ್ ಎಸ್‌ಯುವಿ’ ಎಂದು ಕರೆಯಲಾಗುತ್ತದೆ.
ಕಾಮತ್ ಸಹೋದರರಲ್ಲಿ ಕಿರಿಯರಾದ ನಿಖಿಲ್ ಕಾಮತ್ ಅವರು ವ್ಯವಹಾರ ಚತುರತೆ ಮತ್ತು ಲೋಕೋಪಕಾರಿ ಕೆಲಸಗಳಿಗೆ ಹೆಸರುವಾಸಿಯಾಗಿದ್ದರೆ, ಜೆರೋಧಾ ಸಿಇಒ ನಿತಿನ್ ಕಾಮತ್ ಅವರು ಹಣಕಾಸು ತಂತ್ರಜ್ಞಾನ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದಾರೆ. ಇವರಿಬ್ಬರೂ ತಮ್ಮ ಯಶಸ್ಸಿಗೆ ತಮ್ಮ ತಾಯಿ ತಮ್ಮಲ್ಲಿ ತುಂಬಿದ ಮೌಲ್ಯಗಳೇ ಕಾರಣ ಎಂದು ಹೇಳಿಕೊಂಡಿದ್ದು, ಅಮ್ಮನ ನಿರಂತರ ಬೆಂಬಲಕ್ಕೆ ನೀಡಿದ ಭಾವನಾತ್ಮಕ ಗೌರವವೆಂದು ಈ ಉಡುಗೊರೆಯನ್ನು ನೀಡಿದ್ದಾರೆ.