ಕೇರಳಕ್ಕೆ ಮತ್ತೆ ನಿಫಾ ಆತಂಕ ಕಾಡುತ್ತಿದೆ. ನಿಫಾ ವೈರಸ್ ನಿಂದ ಬಳಲುತ್ತಿದ್ದ 14 ವರ್ಷದ ಬಾಲಕ ಕೇರಳ ಕೋಝಿಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಈ ಮೂಲಕ ಕೇರಳದಲ್ಲಿ ಐದನೇ ಬಾರಿಗೆ ನಿಫಾ ಕಾಣಿಸಿಕೊಂಡಂತಾಗಿದೆ. ಬಾಲಕನ ಸಾವಿನೊಂದಿಗೆ ಇಲ್ಲಿಯವರೆಗೆ 22 ಜನ ನಿಫಾಗೆ ಬಲಿಯಾದಂತಾಗಿದೆ. ಈ ಹಿನ್ನೆಲೆಯಲ್ಲಿ ಭಾರಿ ಮುಂಜಾಗ್ರತೆಯನ್ನು ಕೇರಳ ಆರೋಗ್ಯ ಇಲಾಖೆ ಕೈಗೊಂಡಿದೆ. ಸದ್ಯ ಕೇರಳದಲ್ಲಿ 330 ಜನರ ಮೇಲೆ ನಿಗಾ ವಹಿಸಲಾಗಿದೆ.
ಜು.15 ರಂದು 14 ವರ್ಷದ ಬಾಲಕನಲ್ಲಿ ನಿಫಾ ವೈರಸ್ ಕಂಡು ಬರುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಾಲಕನೊಂದಿಗೆ ಸಂಪರ್ಕಕ್ಕೆ ಬಂದಿದ್ದ ನಾಲ್ವರಲ್ಲಿ ಕೂಡ ಈ ರೋಗ ಲಕ್ಷಣ ಕಂಡು ಬಂದಿದೆ. ಈ ಮೂಲಕ ಆತನ ಸಂಪರ್ಕಕ್ಕೆ ಬಂದಿದ್ದ ಒಟ್ಟು 330 ಜನ ನಿಗಾದಲ್ಲಿದ್ದಾರೆ. ಅವರಲ್ಲಿ 101 ಮಂದಿ ಹೈರಿಸ್ಕ್ ವಿಭಾಗದಲ್ಲಿದ್ದಾರೆ. ಇದರಲ್ಲಿ 68 ಮಂದಿ ಆರೋಗ್ಯ ಕಾರ‍್ಯಕರ್ತರು ಎನ್ನಲಾಗಿದೆ.
ಸಾವನ್ನಪ್ಪಿದ ಬಾಲಕ ಸ್ನೇಹಿತರೊಂದಿಗೆ ಸೇರಿ ಮರದಿಂದ ಅವಟೆ ತಿಂದಿದ್ದಾನೆ ಎಂದು ವರದಿಯಾಗಿದೆ. ಇಲ್ಲಿ ಬಾವಲಿಗಳು ಇರುವುದು ದೃಢಪಟ್ಟಿದೆ. ಇದೀಗ ಮನೆ ಸಮೀಕ್ಷೆ ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಹೀಗಾಗಿ ಮಲಪ್ಪುರ ಜಿಲ್ಲೆಯ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ದೇಶದಲ್ಲಿ ಕೂಡ ನಿಫಾ ಆತಂಕ ಮನೆ ಮಾಡಿದೆ. ಪಕ್ಕದ ಕರ್ನಾಟಕದಲ್ಲಿ ಕೂಡ ಎಚ್ಚರವಾಗಿರುವಂತೆ ಸೂಚಿಸಲಾಗಿದೆ.