ಬೆಂಗಳೂರು: ರಾಜ್ಯದ ಜನರಿಗೆ ಒಂದಿಲ್ಲ ಒಂದು ಆತಂಕ, ಸಂಕಷ್ಟ ಶುರುವಾಗಿದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಮಳೆರಾಯ ಜನರ ಬದುಕು ಕಿತ್ತು ತಿನ್ನುತ್ತಿದ್ದರೆ, ಕೆಲವೆಡೆ ಡೆಂಗ್ಯೂ (Dengue) ಜನರ ಬದುಕನ್ನು ಕತ್ತಲೆಗೆ ದೂಡುತ್ತಿದೆ. ಇದರ ಮಧ್ಯೆ ಈಗ ಮತ್ತೆ ರಾಜ್ಯಕ್ಕೆ ನಿಫಾ (Nipah virus) ಆತಂಕ ಶುರುವಾಗಿದೆ.
ಕೇರಳದ ಮಲಪ್ಪುರಂನಲ್ಲಿ 14 ವರ್ಷದ ಬಾಲಕನಿಗೆ ನಿಫಾ ವೈರಸ್ ದೃಢವಾಗಿದೆ. ಹೀಗಾಗಿ ರಾಜ್ಯದಲ್ಲಿ ಡೆಂಗ್ಯೂ ಜೊತೆ ನಿಫಾ ವೈರಸ್ ಆತಂಕ ಶುರುವಾಗಿದೆ. ನಿಫಾ ಇರುವುದನ್ನು ಆರೋಗ್ಯ ಸಚಿವರು ದೃಢಪಡಿಸಿದ್ದಾರೆ. ನಿಫಾ ಸೋಂಕಿತ ಬಾಲಕನಿಗೆ,ಕೊಯಿಕ್ಕೋಡ್ ಆಸ್ಪತ್ರೆಯ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕನ ಮನೆಯವರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನಿರ್ದೇಶಿಸಲಾಗಿದೆ.
ಬಾವಲಿ ಮತ್ತು ಹಂದಿಗಳ ದೈಹಿಕ ದ್ರವದ ಮೂಲಕ ನಿಫಾ ವೈರಸ್ ಹರಡುತ್ತದೆ. ಹೀಗೆ ಒಬ್ಬರಿಂದ ಒಬ್ಬರಿಗೆ ಹರಡುವ ಈ ನಿಫಾ ವೈರಸ್ ಸೋಂಕಿಗೆ ಸದ್ಯ ಯಾವುದೇ ಚಿಕಿತ್ಸೆ ಇಲ್ಲ. ಹಾಗಾಗಿ ಮರಣ ಪ್ರಮಾಣ ಶೇ.70ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 486 ಡೆಂಗ್ಯೂ ಪ್ರಕರಣ ದಾಖಲಾಗಿವೆ. ಬೆಂಗಳೂರಲ್ಲಿ ಒಂದೇ ದಿನದಲ್ಲಿ 296 ಕೇಸ್ ದಾಖಲಾಗಿವೆ.
