ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ ಹಾಗೂ ಸುರಾಗ್ ನಿರ್ದೇಶನದ ಹಾಗೂ ಪ್ರವೀರ್ ಮತ್ತು ರಿಷಿಕಾ ನಾಯಕ – ನಾಯಕಿಯಾಗಿ ನಟಿಸಿರುವ “ನಿದ್ರಾದೇವಿ next door” ಚಿತ್ರ ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸಿರುವ ಚಿತ್ರವಾಗಿದೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ ಈ ಚಿತ್ರದ “ಸ್ಲೀಪ್ ಲೆಸ್ ಆಂಥೆಮ್” ಹಾಡು ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದ್ದು, ಮೆಚ್ಚುಗೆ ಪಡೆದುಕೊಂಡಿದೆ. ಈ ಹಾಡನ್ನು ದುನಿಯಾ ವಿಜಯ್ ಕುಮಾರ್ ಬಿಡುಗಡೆ ಮಾಡಿದ್ದರು. ಪ್ರಸ್ತುತ ಚಿತ್ರದ ಎರಡನೇ ಹಾಡು “ನೀ ನನ್ನ” ಎಂಬ ರೊಮ್ಯಾಂಟಿಕ್ ಸಾಂಗ್ ಇತ್ತೀಚೆಗೆ ಸರೆಗಮ ಮ್ಯೂಸಿಕ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಅವರು ಈ ಹಾಡನ್ನು ಅನಾವರಣ ಮಾಡಿದರು. ನಾನು ಮೂಲತಃ ಆಡಿಟರ್. ಇದು ನನ್ನ ನಿರ್ಮಾಣದ ಮೂರನೇ ಸಿನಿಮಾ. ನಿರ್ದೇಶಕರು ಬಂದು ಕಥೆ ಹೇಳಿದಾಗ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಚಿತ್ರಕ್ಕೆ ಹಾಡುಗಳು ಇನ್ವಿಟೇಶನ್ ಇದ್ದ ಹಾಗೆ. ಹಾಡುಗಳಿಗೆ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ತರುವ ಶಕ್ತಿಯಿದೆ. ಹಾಗಾಗಿ ನಾನು ನಿರ್ದೇಶಕರಿಗೆ ನಮ್ಮ ಚಿತ್ರದಲ್ಲಿ ಸುಮಧುರ ಗೀತೆಗಳಿರಲಿ ಎಂದು ಹೇಳಿದ್ದೆ. ದುನಿಯಾ ವಿಜಯ್ ಅವರಿಂದ ಬಿಡುಗಡೆಯಾದ ನಮ್ಮ ಚಿತ್ರದ ಮೊದಲ ಹಾಡು ಈಗಾಗಲೇ ಜನಮನಸೂರೆಗೊಂಡಿದೆ ಎಂದು ನಿರ್ಮಾಪಕ ಜಯರಾಮ ದೇವಸಮುದ್ರ ತಿಳಿಸಿದರು.
ಪ್ರತಿಷ್ಠಿತ ಅಕಾಡೆಮಿಯಲ್ಲಿ ಸಿನಿಮಾ ಬಗ್ಗೆ ಅಧ್ಯಯನ ಮಾಡಿದ ನನಗೆ ನನ್ನ ಮಾತೃಭಾಷೆಯಲ್ಲೇ ಮೊದಲ ಸಿನಿಮಾ ನಿರ್ದೇಶಿಸಬೇಕೆಂಬ ಆಸೆಯಿತ್ತು. ನಿರ್ಮಾಪಕ ಜಯರಾಮ್ ಅವರು ನನ್ನ ಆಸೆಗೆ ಆಸರೆಯಾದರು. ಯಾವುದೇ ಕೊರತೆ ಬಾರದ ಹಾಗೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇನ್ನೂ ಇಂದು ಬಿಡುಗಡೆಯಾಗಿರುವ ರೊಮ್ಯಾಂಟಿಕ್ ಹಾಡು ರೊಮ್ಯಾಂಟಿಕ್ ಹೀರೊ ಗಣೇಶ್ ಅವರಿಂದ ಬಿಡುಗಡೆಯಾಗಿದ್ದು ಬಹಳ ಖುಷಿಯಾಗಿದೆ. ನಮ್ಮ ಚಿತ್ರಕ್ಕೆ ಪ್ರವೀರ್ ಹಾಗೂ ರಿಷಿಕಾ ಅವರನ್ನು ನಾಯಕ – ನಾಯಕಿ ಎಂದು ಆಯ್ಕೆ ಮಾಡಿದಾಗ ಸಾಕಷ್ಟು ಜನ ನನಗೆ ಈ ಜೋಡಿ ತುಂಬಾ ಚೆನ್ನಾಗಿದೆ ಎಂದರು. ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಹಾಗೂ ಅಜಯ್ ಕುಲಕರ್ಣಿ ಅವರ ಛಾಯಾಗ್ರಹಣ ನಮ್ಮ ಚಿತ್ರದ ಹೈಲೆಟ್ ಎನ್ನಬಹುದು ಎಂದು ನಿರ್ದೇಶಕ ಸುರಾಗ್ ಹೇಳಿದ್ದಾರೆ.
ನಮ್ಮ ಚಿತ್ರದ ಹಾಡು ಬಿಡುಗಡೆ ಮಾಡಿಕೊಟ್ಟ ಗಣೇಶ್ ಅವರಿಗೆ ಧನ್ಯವಾದ ಎಂದು ನಾಯಕ ಪ್ರವೀರ್ ಶೆಟ್ಟಿ ಮಾತನಾಡಿದ್ದಾರೆ. ಇಂದು ಬಿಡುಗಡೆಯಾಗಿರುವ “ನೀ ನನ್ನ” ಹಾಡು ಬಹಳ ಮಧುರವಾಗಿದೆ. ಹಾಡಿನಲ್ಲಿ ನಾಯಕ – ನಾಯಕಿ ಮುದ್ದಾಗಿ ಕಾಣುತ್ತಾರೆ. ಇನ್ನೂ ಹಾಡಿನಷ್ಟೇ ಚಿತ್ರ ಕೂಡ ಚೆನ್ನಾಗಿದಾಗ ಮಾತ್ರ ಜನರು ಚಿತ್ರಮಂದಿರಗಳಿಗೆ ಬರುತ್ತಾರೆ. ಇನ್ನೂ ಭಾಷೆಯಿಂದ ನಾವೇ ಹೊರತು. ನಮ್ಮಿಂದ ಭಾಷೆ ಅಲ್ಲ. ಹಾಗಾಗಿ, ಬಹಳ ಸೊಗಸಾಗಿ ಮೂಡಿ ಬಂದಿರುವ ಈ ಹಾಡನ್ನು ನಿರ್ಮಾಪಕರು ಕನ್ನಡ ಗಾಯಕರಿಂದಲೇ ಪುನಃ ಹಾಡಿಸುತ್ತಾರೆ ಎಂಬ ಭರವಸೆ ನನಗಿದೆ ಎಂದು ಹಾಡು ಬಿಡುಗಡೆ ಸಮಾರಂಭದಲ್ಲಿ ನಾಯಕ ಗಣೇಶ್ ಮಾತನಾಡಿದರು.
“ನಿದ್ರಾದೇವಿ next door” ಸಿನಿಮಾದಲ್ಲಿ ಪ್ರವೀರ್ ಗೆ ಜೋಡಿಯಾಗಿ ರಿಷಿಕಾ ನಟಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಶ್ರುತಿ ಹರಿಹರನ್, ಹಿರಿಯ ನಟ ಕೆ.ಎಸ್.ಶ್ರೀಧರ್, ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಶ್ರೀವತ್ಸ, ಅನೂಪ್, ಐಶ್ವರ್ಯಾ ಗೌಡ, ಮಾಸ್ಟರ್ ಸುಜಯ್ ರಾಮ್, ಕಾರ್ತಿಕ್ ಪತ್ತಾರ್ ಮತ್ತು ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಳಗದಲ್ಲಿದ್ದಾರೆ.
ಬಹು ನಿರೀಕ್ಷಿತ ಈ ಚಿತ್ರಕ್ಕೆ ಉಲ್ಲಾಸ್ ಹೈದೂರ್ ಅವರ ಪ್ರೊಡಕ್ಷನ್ ಡಿಸೈನ್, ಅರ್ಜುನ್ ರಾಜ್ ಸಾಹಸ ನಿರ್ದೇಶನ ಮತ್ತು ಹೇಮಂತ್ ಕುಮಾರ್ ಡಿ ಅವರ ಸಂಕಲನವಿದೆ. ಮನೋಜ್ ಅವರು ಈ ಚಿತ್ರವನ್ನು ವಿಶಾಲ ಕರ್ನಾಟಕಕ್ಕೆ ವಿತರಣೆ ಮಾಡುತ್ತಿದ್ದಾರೆ.


















