ಬೆಂಗಳೂರು: ದೇಶಾದ್ಯಂತ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿರುವ ಕಾರಣ ವಾಹನ ಸವಾರರು ಟೋಲ್ ಪ್ಲಾಜಾಗಳಲ್ಲಿ ಕಾಯುವ ದುಸ್ಥಿತಿ ಈಗ ಇಲ್ಲ. ವಾಹನಗಳಿಗೆ ಅಂಟಿಸಿರುವ ಫಾಸ್ಟ್ ಟ್ಯಾಗ್ ಗಳ ಮೂಲಕವೇ ಹಣ ಕಡಿತವಾಗುವ ಕಾರಣ ವಾಹನಗಳ ಮಾಲೀಕರ ಸಮಯ ಉಳಿಯುತ್ತಿದೆ. ಇಷ್ಟಾದರೂ, ಕೆಲವರು ಟೋಲ್ ಶುಲ್ಕವನ್ನು ನಗದು ರೂಪದಲ್ಲಿ ನೀಡುತ್ತಿದ್ದಾರೆ. ಈಗ ಇದಕ್ಕೆ ಮುಕ್ತಿ ನೀಡುವ ಸಮಯ ಹತ್ತಿರ ಬಂದಿದೆ.
ಹೌದು, 2026ರ ಏಪ್ರಿಲ್ 1ರಿಂದ ದೇಶಾದ್ಯಂತ ಟೋಲ್ ಪ್ಲಾಜಾಗಳಲ್ಲಿ ನಗದು ಮೂಲಕ ಶುಲ್ಕ ಪಾವತಿಸುವ ವ್ಯವಸ್ಥೆಯನ್ನೇ ರದ್ದುಗೊಳಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಆ ಮೂಲಕ ದೇಶದ ಎಲ್ಲ ಟೋಲ್ ಪ್ಲಾಜಾಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಗೆ ಉತ್ತೇಜನ ನೀಡಲು ಪ್ರಾಧಿಕಾರವು ನಿರ್ಧರಿಸಿದೆ ಎನ್ನಲಾಗಿದೆ.
ದೇಶದಲ್ಲಿ ಈಗಾಗಲೇ ಫಾಸ್ಟ್ ಟ್ಯಾಗ ಕಡ್ಡಾಯಗೊಳಿಸಲಾಗಿದೆ. ಹಾಗೊಂದು ವೇಳೆ, ಫಾಸ್ಟ್ ಟ್ಯಾಗ್ ಇಲ್ಲದವರು ಟೋಲ್ ಪ್ಲಾಜಾಗಳ ಮೂಲಕ ಹಾದುವಾಗ ಎರಡು ಪಟ್ಟು ಟೋಲ್ ಶುಲ್ಕ ಕಟ್ಟಬೇಕಾಗುತ್ತದೆ. ಅಂದರೆ. 100 ರೂಪಾಯಿ ಟೋಲ್ ಶುಲ್ಕವಿದ್ದರೆ, 200 ರೂಪಾಯಿ ಟೋಲ್ ಶುಲ್ಕ ಕಟ್ಟಬೇಕಾಗುತ್ತದೆ. ಇದಕ್ಕೆ ಮುಕ್ತಿ ನೀಡಲು ಈಗ ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಈಗಲೂ ಫೋನ್ ಪೇ, ಗೂಗಲ್ ಪೇ ಸೇರಿ ಯುಪಿಐ ಮೂಲಕ ಶುಲ್ಕ ಪಾವತಿಸುವವರಿಗೆ ರಿಯಾಯಿತಿಯನ್ನೂ ನೀಡಲಾಗಿದೆ. ಒಟ್ಟಾರೆಯಾಗಿ, ಇನ್ನುಮುಂದೆ ನಗದು ರೂಪದಲ್ಲಿ ಹಣ ಸ್ವೀಕರಿಸುವುದನ್ನು ನಿಲ್ಲಿಸಲು ಹೆದ್ದಾರಿ ಪ್ರಾಧಿಕಾರವು ಚಿಂತನೆ ನಡೆಸಿದೆ. ದೇಶದಲ್ಲಿ ಶೇ.80ರಷ್ಟು ಪ್ರಯಾಣಿಕರು ಫಾಸ್ಟ್ ಟ್ಯಾಗ್ ಬಳಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ IPRCL ಸಂಸ್ಥೆಯಲ್ಲಿ 47 ಹುದ್ದೆಗಳ ನೇಮಕಾತಿ | 2.8 ಲಕ್ಷ ರೂ. ಸ್ಯಾಲರಿ


















