ಕಲಬುರಗಿ: ಎರಡು ತಿಂಗಳ ಹಿಂದೆಯಷ್ಟೇ ಪ್ರೀತಿಸಿದ ಹುಡುಗನೊಂದಿಗೆ ಮದುವೆಯಾಗಿದ್ದ ನವ ವಿವಾಹಿತೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಕಲಬುರಗಿ ನಗರದ ಆಜಾದಪುರ್ ಬಡಾವಣೆಯಲ್ಲಿ ನಡೆದಿದೆ.
ಅನಸೂಯಾ ಮೃತ ನವ ವಿವಾಹಿತೆ, ಮನೆಯಲ್ಲಿಯೇ ನೇಣು ಬಿಗಿದು ಪ್ರಾಣ ಕಳೆದುಕೊಂಡಿದ್ದಾಳೆ. ಮನೆ ಮಗಳ ಹುಚ್ಚು ನಿರ್ಧಾರಕ್ಕೆ ಕುಟುಂಬಸ್ಥರು ದಿಗ್ಭ್ರಾಂತರಾಗಿದ್ದಾರೆ.
ಕೆಲ ತಿಂಗಳ ಹಿಂದೆ ಅತ್ತೆ ಮಗ ಅವಿನಾಶ್ ಜೊತೆ ಸಪ್ತಪದಿ ತುಳಿದಿದ್ದ ಅನಸೂಯಾ, ಆರಂಭದಲ್ಲಿ ಚೆನ್ನಾಗಿಯೇ ಇದ್ದಳು. ಈಕೆಯ ಮೂವರು ಸಹೋದರಿಯರಿಗೂ ಕೂಡ ವಿವಾಹವಾಗಿದ್ದು, ಅವರೆಲ್ಲರೂ ಸಿಟಿಯಲ್ಲಿ ನೆಲೆಸಿದ್ದರು. ಇದೇ ವಿಚಾರಕ್ಕೆ ದಿನ ಕಳೆದಂತೆ ಅನಸೂಯಾಗೆ ಬೇಸರ ಮೂಡಿದೆ. ತಾನು ಮಾತ್ರ ಮದುವೆಯಾಗಿ ಹಳ್ಳಿಯಲ್ಲಿ ಇದ್ದೇನೆ ಎಂಬ ಗಿಲ್ಟಿ ಫೀಲ್ ಬಂದಿದೆ. ಹೀಗಾಗಿ ಮಾನಸಿಕವಾಗಿ ನೊಂದಿದ್ದ ಈಕೆ, ತವರಿಗೆ ಹೋದಾಗಲೂ ವಿಚಾರವನ್ನು ಒಂದೆರಡುಬಾರಿ ಕುಟುಂಬಸ್ಥರಿಗೆ ಹೇಳಿದ್ದಳು. ತಾನು ಉತ್ತಮ ವಿದ್ಯಾಭ್ಯಾಸ ಪಡೆದರೂ ಹಳ್ಳಿಯಲ್ಲಿ ಜೀವನ ನಡೆಸುತ್ತಿರುವ ಕೊರಗಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾಳೆ. ಈ ವೇಳೆ ಆಕೆಗೆ ಪೋಷಕರು ಬುದ್ಧಿಮಾತು ಕೂಡ ಹೇಳಿದ್ದರು. ಆದರೂ ಇದೇ ವಿಚಾರವಾಗಿ ಕೊರಗುತ್ತಿದ್ದ ಆಕೆ ಕೊನೆಗೂ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಇನ್ನು ಮದುವೆಗೂ ಮುನ್ನ ಅನಸೂಯಾ ಕೂಡ ಬೆಂಗಳೂರಿನಲ್ಲಿ ಒಂದು ವರ್ಷ ಕೆಲಸ ಮಾಡಿದ್ದಳು. ಹೀಗಾಗಿ ಆಕೆಗೆ ಹಳ್ಳಿ ಜೀವನ ಎಂದರೆ ಅಷ್ಟಾಗಿ ಆಗಿ ಬರುತ್ತಿರಲಿಲ್ಲ. ಇತ್ತ ಪ್ರೀತಿಸಿದ ಹುಡುಗ ಬಿಡೋಕು ಆಗುತ್ತಿರಲಿಲ್ಲ. ಮದುವೆ ಬಳಿಕ ಸಿಟಿ ವ್ಯಾಮೋಹ ಈಕೆಯನ್ನು ವಿಪರೀತ ಕಾಡತೊಡಗಿದೆ. ಈ ನಡುವೆಯೂ ಕಲಬುರಗಿಯ ಆಜಾದಪುರದಲ್ಲಿರುವ ಗಂಡನ ಮನೆಯಲ್ಲಿ ಜೀವನ ಕಳೆಯುತ್ತಿದ್ದ ಈಕೆ, ನಿನ್ನೆ ಮಧ್ಯಾಹ್ನ ಗಂಡನ ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಮೈಸೂರು | ಅಪಾರ್ಟ್‌ಮೆಂಟ್‌ಗೆ ಬಣ್ಣ ಹಚ್ಚುವ ವೇಳೆ ಆಯತಪ್ಪಿ ಬಿದ್ದು ಪೇಂಟರ್ ಸಾವು



















