ಪ್ರಯಾಗ್‌ರಾಜ್: ಸಂಗೀತ, ನೃತ್ಯ, ಸಂಪ್ರದಾಯಗಳ ಆಚರಣೆಯೊಂದಿಗೆ ಅದ್ಧೂರಿಯಾಗಿ ನಡೆದಿದ್ದ ಮದುವೆಯು ಅನಿರೀಕ್ಷಿತ ತಿರುವು ಪಡೆದುಕೊಂಡ ಘಟನೆ(Viral News) ಉತ್ತರಪ್ರದೇಶ(Uttar Pradesh)ದಲ್ಲಿ ನಡೆದಿದೆ. ಮದುವೆಯಾದ ಎರಡೇ ದಿನಗಳಲ್ಲಿ ವಧುವಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ವರನಿಗೆ ಆದ ಆಘಾತ ಹೇಳತೀರದು. ದಿಗ್ಭ್ರಮೆಗೊಳಗಾದ ಆತ ಬೇರೆ ದಾರಿ ಕಾಣದೇ ವಧುವನ್ನು ಆಸ್ಪತ್ರೆಗೆ ಒಯ್ದಿದ್ದು, ಅಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ!
ಇಂಥದ್ದೊಂದು ಘಟನೆ ನಡೆದಿರುವುದು ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ. ವಿವಾಹವಾದ ಎರಡೇ ದಿನಗಳಲ್ಲಿ ಮದುಮಗಳು ಮಗುವಿಗೆ ಜನ್ಮ ನೀಡಿದ್ದಾಳೆ. ಘಟನೆ ಬಳಿಕ ರೊಚ್ಚಿಗೆದ್ದಿರುವ ವರನ ಕುಟುಂಬದವರು, ವಧುವು ಈ ವಿಚಾರವನ್ನು ಮುಚ್ಚಿಟ್ಟಿದ್ಯಾಕೆ, ಮಗುವಿನ ತಂದೆ ಯಾರು ಎಂಬುದನ್ನು ಆಕೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಧು ತನ್ನ ಹೊಟ್ಟೆಯನ್ನು ಲೆಹೆಂಗಾದ ಕೆಳಗೆ ಬುದ್ಧಿವಂತಿಕೆಯಿಂದ ಮರೆಮಾಚಿದ್ದಾಳೆ, ಯಾರೂ ಗಮನಿಸದಂತೆ ನೋಡಿಕೊಂಡಿದ್ದಾಳೆ ಎಂದೂ ವರನ ಕುಟುಂಬ ಆರೋಪಿಸಿದೆ.
ವರನ ಸಹೋದರಿ ಈ ಕುರಿತು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಆಕೆ, “ಅವಳು ಸೊಂಟದ ಮೇಲಿಂದಲೇ ಲೆಹೆಂಗಾ ಧರಿಸಿದ್ದಳು. ಹಾಗಾಗಿ ನಮಗ್ಯಾರಿಗೂ ಅನುಮಾನ ಬಂದಿರಲಿಲ್ಲ. ಬಹುಶಃ ಅವಳಿಗೆ ಹೆಚ್ಚು ಚಳಿಯಾಗುತ್ತಿರಬಹುದು ಎಂದು ನಾವು ಭಾವಿಸಿದ್ದೆವು” ಎಂದಿದ್ದಾರೆ.
ಅಲ್ಲದೇ, ಮದುವೆಯ ನಂತರ ವರ ಮತ್ತು ವಧು ಪ್ರತ್ಯೇಕವಾಗಿ ಮಲಗಿದ್ದರು. ಸದ್ಯಕ್ಕೆ ದೈಹಿಕ ಸಂಪರ್ಕ ಬೇಡವೆಂದು ಆಕೆಯೇ ವರನಿಗೆ ಹೇಳಿದ್ದಳು. ಅವರ ನಡುವೆ ಯಾವುದೇ ದೈಹಿಕ ಸಂಪರ್ಕ ಆಗಿರಲಿಲ್ಲ. ಆಕೆ ವಂಚಕಿ. ಕೂಡಲೇ ಮಗುವಿನ ತಂದೆ ಯಾರು ಎಂಬುದನ್ನು ಬಹಿರಂಗಪಡಿಸಬೇಕು” ಎಂದೂ ವರನ ಸಹೋದರಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಖ್ಯಾತ ನಟಿ ಅರೆಸ್ಟ್: ಮನೆ ಮೇಲೆ ದಾಳಿ
ಫೆಬ್ರವರಿ 24 ರಂದು ಈ ವಿವಾಹ ನಡೆದಿತ್ತು. ಮರುದಿನ ವಧುವನ್ನು ಪತಿಯ ಮನೆಗೆ ಸ್ವಾಗತಿಸುವ ಪ್ರಕ್ರಿಯೆ ನಡೆದಿತ್ತು. ಅಲ್ಲಿ ಸಾಂಪ್ರದಾಯಿಕ ‘ಮುಹ್ ದಿಖೈ’ ಸಮಾರಂಭವನ್ನು ಸಂಬಂಧಿಕರು ಮತ್ತು ಅತಿಥಿಗಳ ಸಮ್ಮುಖದಲ್ಲಿ ಏರ್ಪಡಿಸಲಾಗಿತ್ತು.
ಮಾರನೇ ದಿನ ಎಲ್ಲವೂ ಸಹಜವಾಗಿತ್ತು. ವಧುವು ತನ್ನ ಹೊಸ ಕುಟುಂಬ ಸದಸ್ಯರಿಗೆ ಬೆಳಗಿನ ಚಹಾ ಮತ್ತು ಉಪಹಾರವನ್ನೂ ಬಡಿಸಿದ್ದಳು. ಅಂದು ಸಂಜೆಯ ನಂತರ, ಅವಳು ಇದ್ದಕ್ಕಿದ್ದಂತೆ ಕಿಬ್ಬೊಟ್ಟೆ ತುಂಬಾ ನೋಯುತ್ತಿದೆ ಎಂದು ಹೇಳತೊಡಗಿದಳು. ಕೂಡಲೇ ಕುಟುಂಬದ ಸಲಹೆ ಮೇರೆಗೆ ಮದುಮಗ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದ. ಅಲ್ಲಿ ಆಕೆ ಹೆರಿಗೆ ನೋವಿನಿಂದ ಬಳಲುತ್ತಿದ್ದಾಳೆ ಎಂದು ವೈದ್ಯರು ಹೇಳುತ್ತಿದ್ದಂತೆ ಶಾಕ್ ಆಗುವ ಸರದಿ ವರನದ್ದಾಗಿತ್ತು.
ಅಷ್ಟೇ ಅಲ್ಲದೆ ಆಸ್ಪತ್ರೆಯ ವೈದ್ಯರು ಕೂಡ ಹೆರಿಗೆ ಮಾಡಿಸುವ ಒಪ್ಪಿಗೆ ಪತ್ರಕ್ಕೆ ವರನ ತಂದೆ-ತಾಯಿಯಿಂದ ಸಹಿ ಹಾಕಿಸಿಕೊಂಡಿದ್ದಾರೆ.
ಇನ್ನೊಂದೆಡೆ, ವಧುವಿನ ಕುಟುಂಬ ಕೂಡ ಈ ಎಲ್ಲ ಘಟನೆಗಳಿಗೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದು, ಕಳೆದ ವರ್ಷದ ಮೇ ತಿಂಗಳಲ್ಲಿ ಮದುವೆ ನಿಗದಿಯಾಗಿತ್ತು. ಅದಕ್ಕೂ ಮೊದಲೇ ಯುವಕ-ಯುವತಿ ದೈಹಿಕ ಸಂಪರ್ಕ ಹೊಂದಿದ್ದ ಕಾರಣ ಆಕೆ ಈಗ ಮಗುವಿಗೆ ಜನ್ಮ ನೀಡಿದ್ದಾಳೆ ಎಂದಿದೆ. ಆದರೆ, ಈ ವಾದವನ್ನು ವರ ತಳ್ಳಿಹಾಕಿದ್ದು, ಮದುವೆ ನಿಶ್ಚಯವಾಗಿದ್ದೇ ಕಳೆದ ವರ್ಷದ ಅಕ್ಟೋಬರ್‌ನಲ್ಲಿ. ವಧುವಿನ ಕುಟುಂಬ ಸುಳ್ಳು ಹೇಳುತ್ತಿದೆ. ಈ ಬಗ್ಗೆ ತನಿಖೆ ನಡೆಯಲಿ, ನಾನಂತೂ ಆ ಹುಡುಗಿಯನ್ನು ಒಪ್ಪಿಕೊಳ್ಳಲಾರೆ ಎಂದು ಪಟ್ಟು ಹಿಡಿದಿದ್ದಾನೆ.