ರಾವಲ್ಪಿಂಡಿ: ಮೈಕಲ್ ಬ್ರೇಸ್‌ವೆಲ್ (26ಕ್ಕೆ 4) ಸ್ಪಿನ್ ಬೌಲಿಂಗ್ ಹಾಗೂ ರಚಿನ್ ರವೀಂದ್ರ (112 ರನ್‌ಗಳು) ಅವರ ಶತಕದ ನೆರವಿನಿಂದ ಮಿಂಚಿದ ನ್ಯೂಜಿಲೆಂಡ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 5 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಇದರೊಂದಿಗೆ ನ್ಯೂಜಿಲ್ಯಾಂಡ್ ಹಾಗೂ ಭಾರತ ಎ ಗುಂಪಿನಿಂದ ಸೆಮಿಫೈನಲ್ಸ್‌ಗೆ ಪ್ರವೇಶ ಪಡೆದವು.
ಎರಡೂ ತಂಡಗಳು ತಮ್ಮ ತಮ್ಮ ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದಿವೆ. ಬಾಂಗ್ಲಾ ಹಾಗೂ ಆತಿಥೇಯ ಪಾಕಿಸ್ತಾನ ತಂಡಗಳು ಟೂರ್ನಿಯಿಂದ ಹೊರ ಬಿದ್ದವು. ಆ ಎರಡೂ ತಂಡಗಳು ಕೊನೇ ಬಾರಿ ಪರಸ್ಪರ ಮುಖಾಮುಖಿಯಾಗಲಿವೆ.
ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಬಾಂಗ್ಲಾದೇಶ ನೀಡಿದ್ದ 237 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ನ್ಯೂಜಿಲೆಂಡ್ ತಂಡ, ಆರಂಭಿಕ ಆಘಾತ ಅನುಭವಿಸಿದರೂ ರಚಿನ್ ರವೀಂದ್ರ (112) ಶತಕ ಹಾಗೂ ಟಾಮ್ ಲೇಥಮ್ (55) ಅರ್ಧಶತಕದ ಬಲದಿಂದ 46.1 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 240 ರನ್‌ಗಳನ್ನು ಗಳಿಸಿ ಗೆಲುವು ಕಂಡಿತು.

ರಚಿನ್ ರವೀಂದ್ರ ಶತಕದ ಸಾಧನೆ
ಆರಂಭಿಕ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ರಚಿನ್ ರವೀಂದ್ರ, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿದಿದ್ದರು. ಅವರು ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರಿದರು. ವಿಲ್ ಯಂಗ್ ಮತ್ತು ಕೇನ್ ವಿಲಿಯಮ್ಸನ್ ವಿಕೆಟ್ ಬಹುಬೇಗ ಉರುಳಿದರೂ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ರಚಿನ್ ರವೀಂದ್ರ, 105 ಎಸೆತಗಳಲ್ಲಿ ಒಂದು ಶತಕ ಹಾಗೂ 12 ಬೌಂಡರಿಗಳೊಂದಿಗೆ 112 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ತನ್ನ ಮೊದಲ ಶತಕವನ್ನು ಪೂರ್ಣಗೊಳಿಸಿದರು. ಅವರು ವಿಶ್ವ ಕಪ್ನ ಪದಾರ್ಪಣೆ ಪಂದ್ಯದಲ್ಲೂ ಶತಕ ಬಾರಿಸಿ ಮಿಂಚಿದ್ದರು. ಈ ಮೂಲಕ ಎರಡು ಐಸಿಸಿ ಟ್ರೋಫಿಯ ಪದಾರ್ಪಣೆ ಪಂದ್ಯದಲ್ಲಿ ಶತಕ ಬಾರಿಸಿದ ದಾಖಲೆ ಬರೆದರು.
ಡೆವೋನ್ ಕಾನ್ವೆ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಗ್ಲೆನ್ ಫಿಲಿಪ್ಸ್ ಕೊನೆಯಲ್ಲಿ 21 ರನ್ ನೆರವು ನೀಡಿದ್ದರು.
236 ರನ್ ಗಳಿಸಿದ ಬಾಂಗ್ಲಾದೇಶ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡದಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ನಾಯಕ ನಜ್ಮುಲ್ ಹುಸೇನ್ ಶಾಂತೊ (77 ರನ್) ಹಾಗೂ ಜಾಕಿರ್ ಅಲಿ (45 ರನ್) ಅವರನ್ನು ಹೊರತುಪಡಿಸಿ ಇನ್ನುಳಿದವರು ವಿಫಲಗೊಂಡರು. ಬಾಂಗ್ಲಾ ತನ್ನ ಪಾಲಿನ 50 ಓವರ್‌ಗಳನ್ನು ಪೂರ್ಣಗೊಳಿಸಿದರೂ 9 ವಿಕೆಟ್ ನಷ್ಟಕ್ಕೆ 236 ರನ್‌ಗಳಿಗೆ ಸೀಮಿತಗೊಂಡಿತು.
ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಮೈಕಲ್ ಬ್ರೇಸ್‌ವೆಲ್
ನ್ಯೂಜಿಲೆಂಡ್ ತಂಡದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದ ಮೈಕಲ್ ಬ್ರೇಸ್‌ವೆಲ್, 10 ಓವರ್‌ಗಳಲ್ಲಿ ಕೇವಲ 26 ರನ್ ನೀಡಿ ಪ್ರಮುಖ 4 ವಿಕೆಟ್‌ಗಳನ್ನು ಕಬಳಿಸಿದರು. ಜತೆಗೆ ಅದ್ಭುತ ಕ್ಯಾಚ್ ಕೂಡ ಪಡೆದರು. ಈ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.