ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ನಲ್ಲಿ ಶ್ರೀಲಂಕಾ ತಂಡ ಭರ್ಜರಿ ಜಯ ಸಾಧಿಸಿದೆ.
ರೋಚಕ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯವನ್ನು 63 ರನ್ ಗಳ ಅಂತರದಿಂದ ಗೆಲ್ಲುವಲ್ಲಿ ಕೊನೆಗೂ ಆತಿಥೇಯರು ಯಶಸ್ವಿಯಾಗಿದ್ದಾರೆ. ಟಾಸ್ ಗೆದ್ದಿದ್ದ ಶ್ರೀಲಂಕಾ ತಂಡದ ನಾಯಕ ಧನಂಜಯ ಡಿಸಿಲ್ವಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು.
ಪ್ರಥಮ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರಲಿಲ್ಲ. ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಮಿಂದು ಮೆಂಡಿಸ್ (113) ಶತಕ ಬಾರಿಸುವ ಮೂಲಕ ಲಂಕಾ ತಂಡಕ್ಕೆ ಆಸರೆಯಾದರು. ಆ ನಂತರ ಬಂದ ಕುಸಾಲ್ ಮೆಂಡಿಸ್ (50) ಅರ್ಧಶತಕ ಸಿಡಿಸಿದ್ದರು. ಪರಿಣಾಮ ಶ್ರೀಲಂಕಾ ಪ್ರಥಮ ಇನ್ನಿಂಗ್ಸ್ ನಲ್ಲಿ 305 ರನ್ ಗಳಿಸಿತ್ತು.
ನಂತರ ಮೊದಲ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡ ಆರಂಭಿಕ ಆಟಗಾರ ಟಾಮ್ ಲಾಥಮ್ (70) ಉತ್ತಮ ಆರಂಭ ನೀಡಿದರು. ನಾಯಕ ಕೇನ್ ವಿಲಿಯಮ್ಸನ್ 55 ರನ್ , ಡೇರಿಲ್ ಮಿಚೆಲ್ 57 ರನ್ ಸಿಡಿಸಿದರು. ಗ್ಲೆನ್ ಫಿಲಿಪ್ ಬಿರುಸಿನ 49 ರನ್ ಗಳ ನೆರವಿನಿಂದ ನ್ಯೂಜಿಲೆಂಡ್ ತಂಡ 340 ರನ್ ಗಳಿಸಿತು.
35 ರನ್ ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಶ್ರೀಲಂಕಾ, 309 ರನ್ ಗಳಿಸಿತು. ಹೀಗಾಗಿ ನ್ಯೂಜಿಲೆಂಡ್ ತಂಡ ಗೆಲುವಿಗೆ 275 ರನ್ ಗುರಿ ಪಡೆಯಿತು. ಇನ್ನೊಂದೆಡೆ ನ್ಯೂಜಿಲೆಂಡ್ ಗೆ ಇನ್ನೆರಡು ದಿನಗಳು ಬಾಕಿ ಇದ್ದವು. ಹೀಗಾಗಿ ನ್ಯೂಜಿಲೆಂಡ್ ಗೆಲ್ಲುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಶ್ರೀಲಂಕಾ ಬೌಲರ್ ಮುಂದೆ ನ್ಯೂಜಿಲೆಂಡ್ ಆಟಗಾರರು ಮಂಡಿಯೂರಿದ್ದಾರೆ.
ಆದರೆ, ರಚಿನ್ ರವೀಂದ್ರ ಏಕಾಂಗಿ ಹೋರಾಟವನ್ನು ಮುಂದುವರೆಸಿದ್ದರು. ತಂಡದ ಮೊತ್ತವನ್ನು 200ರ ಗಡಿ ದಾಟಿಸಿದ್ದರು. ನಾಲ್ಕನೇ ದಿನ 8 ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲೆಂಡ್ ಗೆ ಕೊನೆಯ ದಿನ 68 ರನ್ ಗಳು ಬೇಕಿದ್ದವು. ಐದನೇ ದಿನದಾಟದ ಎರಡನೇ ಓವರ್ ನಲ್ಲೇ ರಚಿನ್ ರವೀಂದ್ರ (92) ಎಲ್ ಬಿ ಬಲೆಗೆ ಬೀಳಿಸುವಲ್ಲಿ ಪ್ರಭಾತ್ ಜಯಸೂರ್ಯ ಯಶಸ್ವಿಯಾಗಿದ್ದರು. ನಂತರ ವಿಲಿಯಂ ಒರೂರ್ಕೆ (0) ವಿಕೆಟ್ ಪಡೆಯುತ್ತಿದ್ದಂತೆ ಶ್ರೀಲಂಕಾ ಗೆಲುವಿನ ನಗೆ ಬೀರಿತು.
ಈ ಮೂಲಕ ಶ್ರೀಲಂಕಾ ತಂಡ 63 ರನ್ ಗಳ ಜಯ ಸಾಧಿಸಿದೆ. 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಶ್ರೀಲಂಕಾ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.