ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬಿಬಿಎಂಪಿ, ಬೆಸ್ಕಾಂ ಸೇರಿದಂತೆ ಎಲ್ಲ ಇಲಾಖೆಗಳೊಂದಿಗೆ ಚರ್ಚಿಸಲಾಗಿದೆ. ಲೈಟಿಂಗ್ ವ್ಯವಸ್ಥೆ, ಬ್ಯಾರಿಕೇಡ್ ವ್ಯವಸ್ಥೆ, ಅಗ್ನಿಶಾಮಕ ಸಹಾಯದ ಕುರಿತು ಚರ್ಚೆ ನಡೆಸಲಾಗಿದೆ. ಪ್ರಮುಖವಾಗಿ ಎಂಜಿ ರಸ್ತೆ, ಬ್ರಿಗೆಡ್ ರೋಡ್, ಕೋರಮಂಗಲ, ಇಂದಿರಾ ನಗರ ಸೇರಿದಂತೆ ಹೆಚ್ಚು ಜನಸಂಖ್ಯೆ ಸೇರುವ ಪ್ರದೇಶಗಳಲ್ಲಿ ಕಟ್ಟಚ್ಚೆರ ವಹಿಸಲಾಗಿದೆ. ಬ್ರಿಗೆಡ್, ಎಂಜಿ ರಸ್ತೆಯಲ್ಲಿ ಏಕಮುಖ ಸಂಚಾರ, ಸೇಫ್ಟಿ ಐಲ್ಯಾಂಡ್, ಸಿಸಿಟಿವಿ, ಡ್ರೋಣ್ ಕ್ಯಾಮರಾ ಬಳಕೆ ಮಾಡಲಾಗುತ್ತದೆ.
ಶ್ವಾನದಳದ ಮೂಲಕ ಕೂಡ ತಪಾಸಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ನಡೆಯುವ ಮಾದಕ ಜಾಲದ ಮೇಲೆಯೂ ಕಟ್ಟೆಚ್ಚರ ವಹಿಸಲಾಗಿದೆ. ಈಗಾಗಲೇ 3 ವಿದೇಶಿ ಡ್ರಗ್ ಪೆಡ್ಲರ್ ಸೇರಿದಂತೆ 70 ಜನರನ್ನು ಬಂಧಿಸಲಾಗಿದೆ. ಎರಡೂವರೆ ಕೋಟಿಗೂ ಅಧಿಕ ಮೌಲ್ಯದ ಡ್ರಗ್ ಸೇರಿದಂತೆ ಮಾದಕ ವಸ್ತು ಜಪ್ತಿ ಮಾಡಲಾಗಿದೆ. ಲೇಟ್ ನೈಟ್ ಓಪನ್ ಮಾಡುವ ರೆಸ್ಟೋರೆಂಟ್, ಹೋಟೆಲ್, ಪಬ್ ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ನ್ಯೂ ಇಯರ್ ದಿನ ರಾತ್ರಿ ಒಂದು ಗಂಟೆ ಒಳಗೆ ಎಲ್ಲವನ್ನೂ ಮುಚ್ಚುವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಕುಡಿದು ಫ್ಲೈ ಓವರ್ ಮೇಲೆ ರಂಪಾಟ ಮಾಡುವ, ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಂದು ರಾತ್ರಿ ಎಲ್ಲ ರೀತಿಯ ಫ್ಲೈ ಓವರ್ ಗಳನ್ನು ಬಂದ್ ಮಾಡಲಾಗಿರುತ್ತದೆ. ಹೊರ ವಲಯದಲ್ಲಿ ನಡೆಯುವ ಪಾರ್ಟಿಗಳ ಮೇಲೆಯೂ ಕಣ್ಣಿಡಲಾಗಿದೆ. ರೇವ್ ಪಾರ್ಟಿ ಸೇರಿದಂತೆ ಹೊರವಲಯದಲ್ಲಿ ನಡೆಯುವ ಪಾರ್ಟಿಗಳ ಮೇಲೆ ಕಣ್ಣಿಡಲಾಗಿದೆ ಎಂದಿದ್ದಾರೆ.
ಬೈಕ್ ಗಳಲ್ಲಿ ಪದೇ ಪದೇ ಓಡಾಟ, ಹೊಸ ವರ್ಷ ವಿಶ್ ಮಾಡುವ ಬರದಲ್ಲಿ ಕೂಗಾಟ, ಪೀಪಿ ಊದುವುದು, ವಿಚಿತ್ರ ರೀತಿ ಮಾಸ್ಕ್ ಹಾಕುವುದು, ಮಕ್ಕಳಿಗೆ, ವೃದ್ದರಿಗೆ, ಹೆಣ್ಣುಮಕ್ಕಳಿಗೆ ತೊಂದರೆ ಕೊಟ್ಟರೆ ದಂಡಿಸಲಾಗುವುದು ಎಂದಿದ್ದಾರೆ.