ಕಳೆದ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಮಧ್ಯಮ ವರ್ಗದವರಿಗೆ ಸಿಹಿ ಸುದ್ದಿ ನೀಡಿದೆ. 2025-26ರ ಸಾಲಿನ ಕೇಂದ್ರ ಬಜೆಟ್ ನಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು 12 ಲಕ್ಷ ರೂಪಾಯಿಗೆ ಹೆಚ್ಚಿಸಿದೆ. ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡವರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಅಂದರೆ, ಹೊಸ ತೆರಿಗೆ ಪದ್ಧತಿಯಲ್ಲಿ 12 ಲಕ್ಷ ರೂ.ವರೆಗಿನ ಸಂಬಳದ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಅಲ್ಲದೆ, ಸಂಬಳ ಪಡೆಯುವ ಉದ್ಯೋಗಿಗಳಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ 75 ಸಾವಿರ ರೂ. ಇರಲಿದೆ. ಅಂದರೆ ವೇತನ ಪಡೆಯುವವರು ವಾರ್ಷಿಕ 12.75 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಪಾವತಿಸುವ ಅಗತ್ಯ ಇಲ್ಲ. ಹಾಗಾಗಿ, ಹೆಚ್ಚಿನ ಜನರಿಗೆ ಹೊಸ ತೆರಿಗೆ ಪದ್ಧತಿ ಆಪ್ತ ಎನಿಸಲಿದೆ.
ಹಳೆಯ ತೆರಿಗೆ ಪದ್ಧತಿ ಯಥಾಸ್ಥಿತಿ
ಕೇಂದ್ರ ಸರ್ಕಾರ ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಕೆಲವು ಹೂಡಿಕೆಗಳ ಮೇಲೆ ತೆರಿಗೆ ಕಡಿತ ಮತ್ತು ವಿನಾಯಿತಿಗಳಿವೆ. ಹೀಗಾಗಿ 12 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ ಹಳೆಯ ತೆರಿಗೆ ಪದ್ಧತಿಯೇ ಪ್ರಯೋಜನಕಾರಿಯಾಗಿ ಮುಂದುವರಿಯಲಿದೆ. ಹಳೆ ತೆರಿಗೆ ಪದ್ಧತಿಯಲ್ಲಿ ಸಂಬಳ ಪಡೆಯುವ ವ್ಯಕ್ತಿಗಳಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ 50 ಸಾವಿರ ರೂ. ಆಗಿದೆ.
ಹೊಸ ತೆರಿಗೆ ಪದ್ಧತಿಯ ಸ್ಲ್ಯಾಬ್ ಇಲ್ಲಿದೆ
ಮೊತ್ತ ತೆರಿಗೆ
0-4,00,000 ರೂ. 0%
4,00,001-8,00,000 ರೂ. 5%
8,00,001-12,00,000 ರೂ. 10
₹12,00,001-16,00,000 ರೂ. 15%
16,00,001-20,00,000 ರೂ. 20%
₹20,00,001-24,00,000 ರೂ. 25%
₹24,00,001 ಅಥವಾ ಹೆಚ್ಚಿನ ಮೊತ್ತ 30%
ಹಳೆಯ ತೆರಿಗೆ ಸ್ಲ್ಯಾಬ್
ಮೊತ್ತ ತೆರಿಗೆ
₹0- 2,50,000 ರೂ. – 0%
₹2,50,001-5,00,000 ರೂ. 5%
₹5,00,001-10,00,000 ರೂ. 20%
₹10,00,001 ರೂ. ಅಥವಾ ಹೆಚ್ಚು 30%
2025ರ ಮಾರ್ಚ್ 31 ರವರೆಗೆ ಅನ್ವಯವಾಗುವಂತೆ ತೆರಿಗೆ ವಿನಾಯಿತಿ ಮಿತಿ 7 ಲಕ್ಷ ರೂ.ವರೆಗೆ ಮಾತ್ರ ಇತ್ತು. 7 ಲಕ್ಷದವರೆಗೆ ಆದಾಯ ಇರುವವರಿಗೆ ಯಾವುದೇ ತೆರಿಗೆ ಇರಲಿಲ್ಲ. ಇದೀಗ ತೆರಿಗೆ ವಿನಾಯಿತಿ ಮಿತಿಯನ್ನು 12 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಇದರಿಂದ 12 ಲಕ್ಷ ರೂ. ಆದಾಯ ಇರುವವರಿಗೆ ಸುಮಾರು 83,200 ರೂ. ತೆರಿಗೆ ಉಳಿತಾಯವಾಗಲಿದೆ. ಹಾಗಾಗಿ, 12 ಲಕ್ಷ ರೂ.ವರೆಗಿನ ಆದಾಯ ಇರುವವರಿಗೆ ಹೊಸ ತೆರಿಗೆ ಪದ್ಧತಿ ಅನುಕೂಲಕರ ಎನಿಸಲಿದೆ.