ಬೆಂಗಳೂರು: ಧೂಮಪಾನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಬಿಬಿಎಂಪಿ ಹೊಸ ಕಾರ್ಯಕ್ಕೆ ಮುಂದಾಗಿದೆ.
ಬಿಬಿಎಂಪಿಯು ತಂಬಾಕು ಮಾರಾಟಕ್ಕೆ ಪ್ರತ್ಯೇಕ ಟ್ರೇಡ್ ಲೈಸೆನ್ಸ್ ಪಡೆಯುವುದನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ಹಿಂದಿನ ವರ್ಷವೇ ಈ ಕುರಿತು ನಿಯಮ ಪ್ರಕಟಿಸಲು ಮುಂದಾಗಿದ್ದರೂ ಪಾಲಿಕೆಯ ಆನ್‌ಲೈನ್ ವ್ಯವಸ್ಥೆಯಲ್ಲಿ ಸೇರಿಸಲು ತಡವಾಗಿತ್ತು. ಆದರೆ, ಈಗ ಉದ್ದಿಮೆ ಪರವಾನಿಗೆ ನಿಯಮ ಸದ್ಯದಲ್ಲೇ ಜಾರಿಗೆ ಬರಲಿದೆ.
ಹೊಸ ನಿಯಮದಂತೆ ಅಂಗಡಿ-ಮುಂಗಟ್ಟುಗಳಲ್ಲಿ ಬೀಡಿ, ಸಿಗರೇಟು, ಗುಟ್ಕಾ ಸೇರಿದಂತೆ ಯಾವುದೇ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡಬೇಕಾದರೂ ಸಾಮಾನ್ಯ ಟ್ರೇಡ್ ಲೈಸೆನ್ಸ್ ನೊಂದಿಗೆ ತಂಬಾಕು ವ್ಯಾಪಾರ ಪರವಾನಗಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕಿದೆ. ಇಲ್ಲವಾದರೆ ಬಿಬಿಎಂಪಿ ದಂಡ ವಿಧಿಸಲಿದೆ. ಬೆಂಗಳೂರಿನಲ್ಲಿ 60 ಸಾವಿರಕ್ಕೂ ಅಧಿಕ ಅಂಗಡಿ-ಮುಂಗಟ್ಟುಗಳಿವೆ. ಸಿಗರೇಟು ಮಾರುವುದಾದರೆ ಇಡೀ ಪ್ಯಾಕೆಟ್ ಮಾರಾಟ ಮಾಡಬೇಕು.
ಬಿಡಿ ಸಿಗರೇಟ್ ಮಾರಾಟ ಮಾಡಬಾರದೆಂಬ ನಿಯಮಗಳಿದ್ದರೂ, ಯಾವುದೇ ವ್ಯಾಪಾರಿಗಳು ಪಾಲಿಸುತ್ತಿಲ್ಲ. ಜತೆಗೆ ತಂಬಾಕು ಮಾರಾಟ ಮಾಡುವ ಮಳಿಗೆಗಳ ಮುಂದೆ ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಎಂಬ ಬೋರ್ಡ್ ಸ್ಪಷ್ಟವಾಗಿ ಕಾಣುವಂತೆ ಅಳವಡಿಸಬೇಕು. ಆದರೆ, ಈಗ ಹೊಸ ಟ್ರೇಡ್ ಲೈಸೆನ್ಸ್ ಪದ್ಧತಿ ಜಾರಿಗೆ ಬಂದ ನಂತರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇಲ್ಲವಾದರೆ ವ್ಯಾಪಾರ ಲೈಸೆನ್ಸ್‌ಗೆ ಕುತ್ತು ಬರಲಿದೆ.



















