ಬೆಂಗಳೂರು : ನಾಳೆಯಿಂದ ಅಂದರೆ, ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ. ಹೊಸ ಹಣಕಾಸು ನಿಯಮಗಳಲ್ಲಿ ಮನೆಯ ಮಾಲೀಕರು ಹಾಗೂ ಬಾಡಿಗೆದಾರರಿಗೆ ಸಂಬಂಧಿಸಿದ ನಿಯಮಗಳನ್ನು ರೂಪಿಸಲಾಗಿದೆ. ಅದರಲ್ಲೂ, ನಗದು ರೂಪದಲ್ಲಿ ಹಣ ಸ್ವೀಕರಿಸುವ ದಿಸೆಯಲ್ಲಿ ಮಹತ್ವದ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಹಾಗಾಗಿ, ಹೊಸ ನಿಯಮಗಳನ್ನು ತಿಳಿಯುವುದು ಅತ್ಯವಶ್ಯವಾಗಿದೆ.
ನೀವು 20 ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ಬಾಡಿಗೆ ಅಥವಾ ಸೆಕ್ಯೂರಿಟಿ ಡೆಪಾಸಿಟ್ (Advance) ರೂಪದಲ್ಲಿ ನೀಡುತ್ತಿದ್ದರೆ, ಅದನ್ನು ನಗದು ರೂಪದಲ್ಲಿ ನೀಡುವಂತಿಲ್ಲ. ಈ ಮೊತ್ತವನ್ನು ಚೆಕ್, ನೆಫ್ಟ್ (NEFT), ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ಮೂಲಕವೇ ಪಾವತಿಸಬೇಕು. ಒಂದು ವೇಳೆ ಈ ನಿಯಮ ಮೀರಿ 20 ಸಾವಿರ ರೂಪಾಯಿಗಿಂತ ಹೆಚ್ಚು ನಗದು ಸ್ವೀಕರಿಸಿದರೆ, ಮನೆ ಮಾಲೀಕರು ಆ ಮೊತ್ತಕ್ಕೆ ಸಮನಾದ ಶೇ.100ರಷ್ಟು ದಂಡವನ್ನು ತೆರಬೇಕಾಗಬಹುದು.
ಹಾಗೆಯೇ, ಬಾಡಿಗೆದಾರರು ಕೂಡ ಹೊಸ ನಿಯಮಗಳನ್ನು ತಿಳಿದುಕೊಂಡಿರಬೇಕು. ಮನೆ ಖಾಲಿ ಮಾಡುವಾಗ ಮನೆಯ ಮಾಲೀಕರಿಂದ 20 ಸಾವಿರ ರೂ.ಗಿಂತ ಹೆಚ್ಚಿನ ಅಡ್ವಾನ್ಸ್ ಹಣವನ್ನು ನಗದು ರೂಪದಲ್ಲಿ ಪಡೆಯಬಾರದು. ಹೀಗೆ, ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಪಡೆದರೆ ಅದಕ್ಕೂ ಶೇ.100ರಷ್ಟು ದಂಡವನ್ನು ತೆರಬೇಕಾಗುತ್ತದೆ.
ಬಾಡಿಗೆದಾರರು ತಿಳಿಯಬೇಕಾದ ನಿಯಮಗಳು
ಸೆಕ್ಯೂರಿಟಿ ಡಿಪಾಸಿಟ್ ಮಿತಿ : ವಸತಿ ಮನೆಗಳಿಗೆ ಗರಿಷ್ಠ 2 ತಿಂಗಳ ಬಾಡಿಗೆಯನ್ನು ಮಾತ್ರ ಅಡ್ವಾನ್ಸ್ ಆಗಿ ಪಡೆಯಲು ಅವಕಾಶವಿದೆ. (ವಾಣಿಜ್ಯ ಕಟ್ಟಡಗಳಿಗೆ 6 ತಿಂಗಳ ಮಿತಿ).
ಲಿಖಿತ ಒಪ್ಪಂದ ಕಡ್ಡಾಯ : ಇನ್ನು ಮುಂದೆ ಮೌಖಿಕ ಒಪ್ಪಂದಗಳಿಗೆ ಬೆಲೆ ಇರುವುದಿಲ್ಲ. ಪ್ರತಿಯೊಂದು ಬಾಡಿಗೆ ವ್ಯವಹಾರಕ್ಕೂ ಲಿಖಿತ ಒಪ್ಪಂದ (Rent Agreement) ಇರಬೇಕು ಮತ್ತು ಅದನ್ನು 60 ದಿನಗಳೊಳಗೆ ನೋಂದಾಯಿಸುವುದು ಕಡ್ಡಾಯ.
ಬಾಡಿಗೆ ಏರಿಕೆ : ಮನೆ ಮಾಲೀಕರು ಬಾಡಿಗೆ ಏರಿಸುವ 3 ತಿಂಗಳ ಮೊದಲು ಬಾಡಿಗೆದಾರರಿಗೆ ಲಿಖಿತ ನೋಟಿಸ್ ನೀಡಬೇಕು. ವರ್ಷಕ್ಕೆ ಒಮ್ಮೆ ಮಾತ್ರ ಬಾಡಿಗೆ ಹೆಚ್ಚಿಸಲು ಅವಕಾಶವಿದೆ.
ಮನೆ ಪ್ರವೇಶ : ರಿಪೇರಿ ಅಥವಾ ತಪಾಸಣೆಗಾಗಿ ಮನೆ ಮಾಲೀಕರು ಬರುವುದಿದ್ದರೆ 24 ಗಂಟೆಗಳ ಮೊದಲು ನೋಟಿಸ್ ನೀಡಬೇಕು.
ಇದನ್ನೂ ಓದಿ : ಸಿದ್ದರಾಮಯ್ಯ ಸರ್ಕಾರ ಟ್ಯಾಕ್ಸ್ ಟೆರರಿಸಂ ಮಾಡ್ತಿದೆ | ಬಸವರಾಜ್ ಬೊಮ್ಮಾಯಿ



















