ಬೆಂಗಳೂರು: ದೇಶದಲ್ಲಿ ಚಿನ್ನದ ಆಭರಣಗಳನ್ನು ಮದುವೆ ಸೇರಿ ಹಲವು ಸಮಾರಂಭಗಳಿಗಾಗಿ ಖರೀದಿಸುವ ಜತೆಗೆ, ಇದನ್ನು ಹೂಡಿಕೆಯ ಸಾಧನವನ್ನಾಗಿಯೂ ಬಳಸಲಾಗುತ್ತದೆ. ಕುಟುಂಬದಲ್ಲಿ ತುರ್ತು ಸಂದರ್ಭಗಳು ಎದುರಾದಾಗ ಚಿನ್ನವನ್ನು ಮಾರಾಟ ಮಾಡುವ ಇಲ್ಲವೇ ಅಡಮಾನ ಇರಿಸಿ ಸಾಲ ಪಡೆಯುವ ಉದ್ದೇಶವೂ ಇರುತ್ತದೆ. ಇತ್ತೀಚಿಗೆ ಚಿನ್ನದ ಅಡಮಾನ ಇರಿಸಿ ಸಾಲ ಪಡೆಯುವವರ ಸಂಖ್ಯೆ ಜಾಸ್ತಿಯಾಗುತ್ತಿರುವ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ ಈಗ ಬ್ಯಾಂಕ್ ಗಳು ಹಾಗೂ ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ (ಎನ್ ಬಿಎಫ್ ಸಿ) ಹೊಸ ನಿಯಮ ಜಾರಿಗೊಳಿಸಿದೆ. 2026ರ ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿಗೆ ಬರಲಿದ್ದು, ಚಿನ್ನದ ಅಡಮಾನ ಇರಿಸಿ ಸಾಲ ಪಡೆಯುವವರ ರಕ್ಷಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ.
ಲೋನ್-ಟು-ವ್ಯಾಲ್ಯೂ ರೇಶಿಯೋ ಹೆಚ್ಚಳ
ಅಡಮಾನ ಇರಿಸುವ ಚಿನ್ನದ ಮೌಲ್ಯ ಹಾಗೂ ಚಿನ್ನದ ಮೌಲ್ಯ ಆಧರಿಸಿ ನೀಡುವ ಸಾಲದ ಮೊತ್ತವನ್ನೇ ಲೋನ್-ಟು-ವ್ಯಾಲ್ಯೂ ರೇಶಿಯೋ (ಎಲ್ ಟಿವಿ) ಎಂದು ಕರೆಯುತ್ತಾರೆ. ಇದರ ಪ್ರಮಾಣವನ್ನು ಆರ್ ಬಿಐ ಈಗ ಜಾಸ್ತಿ ಮಾಡಿದೆ. ಅಂದರೆ, ಒಬ್ಬ ವ್ಯಕ್ತಿಯು 1 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಅಡಮಾನ ಇರಿಸಿದ್ದಾರೆ ಎಂದಿಟ್ಟುಕೊಳ್ಳಿ. ಆ ಒಂದು ಲಕ್ಷ ರೂಪಾಯಿ ಚಿನ್ನದ ಮೌಲ್ಯವನ್ನು ಆಧರಿಸಿ ಬ್ಯಾಂಕ್ ಗಳು ಅಥವಾ ಹಣಕಾಸು ಸಂಸ್ಥೆಗಳು ಎಷ್ಟು ಪ್ರಮಾಣದ ಸಾಲ ನೀಡುತ್ತವೆ ಎಂಬುದು ಲೋನ್-ಟು-ವ್ಯಾಲ್ಯೂ ರೇಶಿಯೋ ಎಂದು ಕರೆಯಲಾಗುತ್ತದೆ.
2.5 ಲಕ್ಷ ರೂಪಾಯಿವರೆಗಿನ ಸಾಲ- 85% ಎಲ್ ಟಿವಿ
2.5 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೆ ಸಾಲ: 80% ಎಲ್ ಟಿವಿ
5 ಲಕ್ಷ ರೂ.ಗಿಂತ ಹೆಚ್ಚಿನ ಸಾಲ- 75% ಎಲ್ ಟಿವಿ
ಹಾಗೆಯೇ, ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಿದ ನಂತರ ಬ್ಯಾಂಕ್ ಗಳು 7 ಕೆಲಸದ ದಿನಗಳ ಒಳಗೆ ನಿಮ್ಮ ಚಿನ್ನಾಭರಣಗಳಣ್ನು ನಿಮಗೆ ವಾಪಸ್ ನೀಡಲೇಬೇಕು. ಒಂದು ವೇಳೆ ವಿಳಂಬವಾದರೆ, ಬ್ಯಾಂಕ್ ನಿಮ್ಮ ಅಕೌಂಟ್ ಗೆ ದಿನಕ್ಕೆ 5 ಸಾವಿರ ರೂಪಾಯಿಯಂತೆ ದಂಡ ಪಾವತಿಸಬೇಕು.
ಅಷ್ಟೇ ಅಲ್ಲ, 2.5 ಲಕ್ಷ ರೂಪಾಯಿಗಿಂತ ಕಡಿಮೆ ಸಾಲ ಪಡೆಯುವವರಿಗೆ ಯಾವುದೇ ಆದಾಯದ ಪುರಾವೆ ಅಥವಾ ಕ್ರೆಡಿಟ್ ಸ್ಕೋರ್ ಕಡ್ಡಾಯವಿರುವುದಿಲ್ಲ. ಇದರಿಂದ ರೈತರು ಮತ್ತು ಸಾಮಾನ್ಯ ಜನ ಸುಲಭವಾಗಿ ಸಾಲ ಪಡೆಯಬಹುದಾಗಿದೆ. ಒಬ್ಬರು ಗರಿಷ್ಠ 1 ಕೆ.ಜಿ ಚಿನ್ನವನ್ನು ಅಡಮಾನ ಇರಿಸಬಹುದು. ಜನರು ಅಡಮಾನ ಇರಿಸಿದ ಚಿನ್ನ ಕಳೆದುಹೋದರೆ, ಅದಕ್ಕೆ ಬ್ಯಾಂಕ್ ಗಳೇ ಹೊಣೆ ಎಂಬ ನಿಯಮಗಳು ಕೂಡ ಇವೆ.
ಇದನ್ನೂ ಓದಿ: ಅಂಚೆ ಇಲಾಖೆಯಲ್ಲಿ 30 ಸಾವಿರ ಹುದ್ದೆಗಳ ನೇಮಕಾತಿ : ಎಸ್ಸೆಸ್ಸೆಲ್ಸಿ ಪಾಸಾಗಿದ್ದರೂ ಸಾಕು



















