ಬೆಂಗಳೂರು: ಜನರ ಅಪೇಕ್ಷೆಯಿದ್ದರೆ, ನಾನು ಪಕ್ಷ ಸ್ಥಾಪಿಸುತ್ತೇನೆ ಎಂದು ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಜನರು ನನಗೆ ಹೊಸ ಪಕ್ಷ ಸ್ಥಾಪನೆ ಮಾಡು ಎಂದರೆ, ನಾನು ಹೊಸ ಪಕ್ಷ ಸ್ಥಾಪಿಸಲು ಸಿದ್ಧ ಎಂದಿದ್ದಾರೆ. ಬಿಜೆಪಿಯಲ್ಲಿ ಅಶಿಸ್ತು ತೋರಿ, ಕೇಂದ್ರ ಬಿಜೆಪಿಯ ಶಿಸ್ತು ಸಮಿತಿಯಿಂದ ಹೊರದೂಡಲ್ಪಟ್ಟಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಜಯದಶಮಿ ವೇಳೆಗೆ ಹೊಸ ಪಕ್ಷ ಕಟ್ಟುವ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ಸದ್ಯ ರಾಜಕಾರಣದಲ್ಲಿ ಯತ್ನಾಳ್ರ ಹೊಸ ಪಕ್ಷದ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದ್ದು, ಯತ್ನಾಳ್ ಒಂದು ವೇಳೆ ಏನಾದ್ರೂ ಸ್ಥಾಪಿಸಿದ್ದೇ ಆದ್ರೆ, ಅದರ ರಾಜ್ಯಾಧ್ಯಕ್ಷರಾಗಿ ಕೆ.ಎಸ್. ಈಶ್ವರಪ್ಪ ಬರಲಿದ್ದಾರೆ ಎಂಬ ಅಂಶ ಇದೀಗ ಹೊರಬಿದ್ದಿದೆ.
ರಾಜ್ಯ ಬಿಜೆಪಿಯಲ್ಲಿ ಸದ್ಯ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಈ ಹಿಂದೆಯೇ ಪಕ್ಷದಿಂದ ಉಚ್ಛಾಟನೆಗೊಂಡಿರುವ ಕೆ.ಎಸ್.ಈಶ್ವರಪ್ಪ, ಯಡಿಯೂರಪ್ಪರ ಕುಟುಂಬದ ವಿರುದ್ಧ ಸಮರ ಸಾರಿರುವುದು ಈಗ ಇತಿಹಾಸ. ಸದ್ಯ ಯತ್ನಾಳ್ ಕೂಡ ಪೆಟ್ಟು ತಿಂದ ಹುಲಿಯಂತಾಗಿದ್ದು ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದೆ ಆದ್ರೆ, ಶತ್ರುವಿನ ಶತ್ರು ಮಿತ್ರ ಎಂಬಂತೆ ಕೆ.ಎಸ್.ಈಶ್ವರಪ್ಪ ಆ ಪಕ್ಷಕ್ಕೆ ರಾಜ್ಯಾಧ್ಯಕ್ಷರಾಗಲು ಸಿದ್ಧರಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.
ಈಶ್ವರಪ್ಪ ಮಾತ್ರವಲ್ಲದೇ ಹಲವು ನಾಯಕರು ಬರಲಿದ್ದಾರೆ!
ಕೇವಲ ಮಾಜಿ ಉಪ- ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತ್ರವಲ್ಲದೇ, ಹಲವು ನಾಯಕರು ಯತ್ನಾಳ್ ಅವರ ಪಕ್ಷಕ್ಕೆ ಬರಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಕೆ.ಎಸ್. ಈಶ್ವರಪ್ಪ ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸಿದ್ರೆ, ಬಸನಗೌಡ ಪಾಟೀಲ್ ಯತ್ನಾಳ್ ವೀರಶೈವ- ಲಿಂಗಾಯತ ಸಮುದಾಯದ ಪಂಚಮಸಾಲಿ ಸಮಾಜವನ್ನು ಪ್ರತಿನಿಧಿಸುತ್ತಾರೆ. ಇನ್ನು ಕೇಂದ್ರದ ಮಾಜಿ ಸಚಿವ ಫೈರ್ ಬ್ರ್ಯಾಂಡ್ ಅಂತಲೇ ಖ್ಯಾತಿ ಪಡೆದಿದ್ದ ಅನಂತ್ಕುಮಾರ್ ಹೆಗಡೆ, ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್ ವಂಚಿತರಾಗಿದ್ದು, ಅವರು ಈ ಬಣದತ್ತ ಬರಲಿದ್ದಾರೆ ಎನ್ನಲಾಗಿದೆ. ಇನ್ನು ಯಡಿಯೂರಪ್ಪರ ಕುಟುಂಬದ ವಿರುದ್ಧ ಕಳೆದ ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದ ಆರೋಪವನ್ನು ಮಾಡುತ್ತಿರುವ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಇದೆಲ್ಲದಕ್ಕೂ ಸಾರಥ್ಯ ವಹಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.
ಇದರ ಜೊತೆಗೆ ಹಾಲಿ ಶಾಸಕ ರಮೇಶ್ ಜಾರಕಿಹೊಳಿ, ಅವರ ಬೆಂಬಲಿಗರಾದ ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್ ಕೂಡ ಕೈ ಜೋಡಿಸಲಿದ್ದಾರೆ ಎನ್ನಲಾಗಿದ್ದು, ಮಾಜಿ ಸಚಿವ ಅರವಿಂದ ಲಿಂಬಾವಳಿ ಕೂಡ ಒಂದಾಗಲಿದ್ದಾರೆ.
ಇತ್ತ ಕುಮಾರ್ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ತಂಡಕ್ಕೆ ಮುಂದಿನ ದಿನಗಳಲ್ಲಿ ಎಂಟ್ರಿ ಕೊಡುವ ಸಾಧ್ಯತೆಯಿದ್ದು, ಬಿಜೆಪಿಗೆ ಸೆಡ್ಡು ಹೊಡೆಯಲು ಒಂದು ತಂಡವೇ ರಚನೆಯಾಗುತ್ತಿದೆ ಎಂಬ ಮಾತುಗಳು ಜೋರಾಗಿದೆ.
ಅದ್ರೆ ಇದೆಲ್ಲಾ ಕೇವಲ ಚರ್ಚೆಯೋ ಅಥವಾ ಮುಂದೆ ಇದೇ ಮಾದರಿಯಲ್ಲಿ ರಾಜಕೀಯ ಚಟುವಟಿಕೆಗಳು ಆರಂಭವಾಗುತ್ತೋ ಭವಿಷ್ಯದಲ್ಲಿ ಗೊತ್ತಾಗಲಿದೆ.