ಬೆಂಗಳೂರು | ಮುಂಬರುವ ಜೂನ್ 30ರೊಳಗಾಗಿ GBA (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್, ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿದೆ.
ಜಿಬಿಎ ಚುನಾವಣಾ ಉಸ್ತುವಾರಿಯನ್ನಾಗಿ ರಾಮ್ ಮಾಧವ್ ಅವರನ್ನು ನೇಮಕ ಮಾಡಲಾಗಿದ್ದು, ಸಹ ಉಸ್ತವಾರಿಗಳಾಗಿ ಸತೀಶ್ ಪೂನಿಯಾ, ಸಂಜಯ್ ಉಪಧ್ಯಾಯ್ ಅವರನ್ನು ನೇಮಕ ಮಾಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಆದೇಶ ಹೊರಡಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರು ನಿನ್ನೆ (ಜ.20) ದೆಹಲಿಯ ಪಕ್ಷದ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದು, ಈ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಚುನಾವಣೆಗೆ ಉಸ್ತುವಾರಿ ಹಾಗೂ ಸಹುಸ್ತುವಾರಿಗಳನ್ನು ನೇಮಕ ಮಾಡುವ ಮೂಲಕ ಪಕ್ಷದ ಕಾರ್ಯಚಟುವಟಿಕೆಗಳನ್ನು ಆರಂಭಿಸಿದ್ದಾರೆ.
ಹಲವು ವರ್ಷಗಳ ಬಳಿಕ ಗ್ರೇಟರ್ ಬೆಂಗಳೂರು ಚುನಾವಣೆ ನಡೆಯುತ್ತಿದೆ. ಹೀಗಾಗಿ ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರನ್ನೇ ಬಿಜೆಪಿ ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಇನ್ನುಳಿದಂತೆ ರಾಜಸ್ಥಾನದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಹಾಗೂ ಮಹಾರಾಷ್ಟ್ರ ಬಿಜೆಪಿ ಶಾಸಕರಾಗಿರುವ ಸಂಜಯ್ ಉಪಾಧ್ಯಾಯ್ ಅವರನ್ನು ಸಹ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.
ಅದೇ ರೀತಿ ಕೇರಳ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ವಿನೋದ್ ತಾವೆ ನೇಮಕ ಮಾಡಲಾಗಿದ್ದು, ಸಹ ಉಸ್ತುವಾರಿಯಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ನೇಮಕ ಮಾಡಲಾಗಿದೆ.
ಇದನ್ನೂ ಓದಿ : “ಹೌದು ಕೊಂದಿದ್ದು ನಾನೇ, ಆದರೆ ಅದು ಕೊಲೆಯಲ್ಲ” | ಆಸ್ಟ್ರೇಲಿಯಾ ನ್ಯಾಯಾಲಯದಲ್ಲಿ ಭಾರತೀಯ ಮೂಲದ ವ್ಯಕ್ತಿಯ ವಿಚಿತ್ರ ವಾದ



















