ಬೆಂಗಳೂರು: ದೇಶದಲ್ಲಿ ಪ್ರಮುಖ ಗುರುತಿನ ಚೀಟಿಯಾಗಿರುವ, ಸರ್ಕಾರದ ಯೋಜನೆಗಳನ್ನು ಪಡೆಯುವುದರಿಂದ ಹಿಡಿದು ಹಲವೆಡೆ ಪ್ರಮುಖ ದಾಖಲೆಯಾಗಿರುವ ಆಧಾರ್ ಕಾರ್ಡ್ ತಿದ್ದುಪಡಿಗೆ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಹೊಸ ನಿಯಮಗಳು ನವೆಂಬರ್ 1ರಿಂದ ಜಾರಿಗೆ ಬಂದಿವೆ. ಆಧಾರ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಲು, ಹೆಸರು, ವಿಳಾಸ, ಬಯೋಮೆಟ್ರಿಕ್ ಅಪ್ಡೇಟ್ ಸೇರಿ ಹಲವು ಸೇವೆಗೆ ಶುಲ್ಕಗಳನ್ನು ಪರಿಷ್ಕರಣೆ ಮಾಡಲಾಗಿದೆ.
ಹೌದು, ಆನ್ ಲೈನ್ ಮೂಲಕ ನೀವು ಆಧಾರ್ ಕಾರ್ಡ್ ತಿದ್ದುಪಡಿ ಮಾಡಲು ಒಂದೊಂದು ಸೇವೆಗಳಿಗೆ ಒಂದೊಂದು ಶುಲ್ಕಗಳನ್ನು ನಿಗದಿಪಡಿಸಲಾಗಿದೆ. ಆಧಾರ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಜನ್ಮದಿನಾಂಕ ತಿದ್ದುಪಡಿಗೆ 18 ವರ್ಷ ದಾಟಿದವರು 75 ರೂಪಾಯಿ ಪಾವತಿಸಬೇಕಾಗುತ್ತದೆ. ಹಾಗೆಯೇ, ಬಯೋಮೆಟ್ರಿಕ್ ಅಪ್ಡೇಟ್ ಮಾಡಲು ಇವರು 125 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಹಾಗೆಯೇ, 17 ವರ್ಷದೊಳಗಿನವರು ಆಧಾರ್ ಕಾರ್ಡ್ ತಿದ್ದುಪಡಿ, ಬಯೋಮೆಟ್ರಿಕ್ ಅಪ್ಡೇಟ್ ಸೇರಿ ಯಾವುದೇ ತಿದ್ದುಪಡಿಗೆ ಶುಲ್ಕವನ್ನು ಪಾವತಿಸದೆಯೇ, ಉಚಿತವಾಗಿ ಅಪ್ಡೇಟ್ ಮಾಡಬಹುದಾಗಿದೆ. ಅಪ್ರಾಪ್ತರು 2026ರ ಜೂನ್ 14ರವರೆಗೆ ಎಲ್ಲ ಅಪ್ಡೇಟ್ ಗಳನ್ನು ಉಚಿತವಾಗಿಯೇ ಮಾಡಬಹುದಾಗಿದೆ. ಆನ್ ಲೈನ್ ಜತೆಗೆ ಆಧಾರ್ ಸೇವಾ ಕೇಂದ್ರಗಳಲ್ಲೂ ಅಪ್ಡೇಟ್ ಮಾಡಬಹುದಾಗಿದೆ.
ಇದರ ಜತೆಗೆ, ನವೆಂಬರ್ 1ರಿಂದ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆದಾಗ್ಯೂ, ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಲು 2025ರ ಡಿಸೆಂಬರ್ 31ರವರೆಗೆ ಗಡುವು ನೀಡಲಾಗಿದೆ. ಇಷ್ಟರೊಳಗೆ ಲಿಂಕ್ ಮಾಡಿಸದಿದ್ದರೆ, ಜನವರಿ 1ರಿಂದ ಪ್ಯಾನ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
ಇದನ್ನೂ ಓದಿ: ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ! ಟಿಕೆಟ್ ರದ್ದು, ತಿದ್ದುಪಡಿಗೆ ಹೆಚ್ಚುವರಿ ಶುಲ್ಕದಿಂದ ವಿನಾಯ್ತಿ



















