ಜೆರುಸಲೇಂ : ಇರಾನ್ ದಾಳಿ ವೇಳೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹತ್ಯೆಗೀಡಾಗಿದ್ದಾರೆ ಎಂಬ ಸಾಮಾಜಿಕ ಜಾಲತಾಣಗಳ ವದಂತಿಗಳನ್ನು ಅವರ ಕಚೇರಿ ಸ್ಪಷ್ಟವಾಗಿ ತಳ್ಳಿಹಾಕಿದೆ. ಪ್ರಧಾನಿ ನೆತನ್ಯಾಹು ಸಂಪೂರ್ಣ ಆರೋಗ್ಯವಾಗಿದ್ದಾರೆ ಹಾಗೂ ಸುರಕ್ಷಿತವಾಗಿದ್ದಾರೆ ಎಂದು ಕಚೇರಿ ಅಧಿಕೃತವಾಗಿ ಸ್ಪಷ್ಟನೆ ನೀಡಿದೆ. ಇತ್ತೀಚೆಗೆ ಬಿಡುಗಡೆಯಾದ ವಿಡಿಯೋವೊಂದರಲ್ಲಿ ನೆತನ್ಯಾಹು ಅವರ ಕೈಯಲ್ಲಿ ಆರು ಬೆರಳುಗಳಿವೆ ಎಂದು ನೆಟ್ಟಿಗರು ವಾದಿಸಿದ ಬೆನ್ನಲ್ಲೇ ಅವರ ಸಾವಿನ ವದಂತಿಗಳು ವ್ಯಾಪಕವಾಗಿ ಹಬ್ಬಿದ್ದವು.
ವದಂತಿಗಳಿಗೆ ಕಾರಣವಾದ ಆ ‘ವಿಡಿಯೋ’
ಶುಕ್ರವಾರ ನೆತನ್ಯಾಹು ಅವರ ಅಧಿಕೃತ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಅಮೆರಿಕ-ಇಸ್ರೇಲ್-ಇರಾನ್ ಯುದ್ಧದ ಕುರಿತಾದ ಪತ್ರಿಕಾಗೋಷ್ಠಿಯ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿತ್ತು. ಈ ವಿಡಿಯೋದ 35ನೇ ಸೆಕೆಂಡ್‌ನಲ್ಲಿ ನೆತನ್ಯಾಹು ಕೈ ಎತ್ತಿದಾಗ ಅವರ ಬಲಗೈಯ ಕಿರುಬೆರಳಿನ ಪಕ್ಕದಲ್ಲಿ ಹೆಚ್ಚುವರಿ ಮಾಂಸಖಂಡದಂತೆ ಗೋಚರಿಸಿತ್ತು. ಇದನ್ನು ಗಮನಿಸಿದ ಸಾಮಾಜಿಕ ಜಾಲತಾಣದ ಬಳಕೆದಾರರು, ಇದೊಂದು ‘ಕೃತಕ ಬುದ್ಧಿಮತ್ತೆ (AI) ಸೃಷ್ಟಿಸಿದ ನಕಲಿ ವಿಡಿಯೋ’ ಎಂದು ವಾದಿಸಿದ್ದರು.
ಅಮೆರಿಕದ ರಾಜಕೀಯ ವಿಮರ್ಶಕಿ ಕ್ಯಾಂಡೇಸ್ ಓವೆನ್ಸ್ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. “ನೆತನ್ಯಾಹು ಎಲ್ಲಿದ್ದಾರೆ? ಅವರ ಕಚೇರಿ ಏಕೆ ನಕಲಿ ಎಐ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದೆ ಮತ್ತು ಅಳಿಸುತ್ತಿದೆ? ಶ್ವೇತಭವನದಲ್ಲಿ ಏಕೆ ಇಷ್ಟೊಂದು ಆತಂಕ ಮನೆಮಾಡಿದೆ?” ಎಂದು ಅವರು ಪ್ರಶ್ನಿಸಿದ್ದರು. ಜೊತೆಗೆ ವಿಡಿಯೋದ ಹಿನ್ನೆಲೆಯಲ್ಲಿರುವ ಕರ್ಟನ್‌ಗಳು ನಿರಂತರವಾಗಿ ಒಂದೇ ರೀತಿಯಲ್ಲಿ ಚಲಿಸುತ್ತಿದ್ದರೆ, ಪಕ್ಕದಲ್ಲಿದ್ದ ಇಸ್ರೇಲ್ ಧ್ವಜಗಳು ಸ್ವಲ್ಪವೂ ಅಲುಗಾಡದಿರುವುದು ಇದು ಎಐ ಸೃಷ್ಟಿ ಎಂಬ ವಾದಕ್ಕೆ ಮತ್ತಷ್ಟು ಪುಷ್ಟಿ ನೀಡಿತ್ತು.
‘ಆರು ಬೆರಳು’ ಕೇವಲ ದೃಷ್ಟಿ ಭ್ರಮೆ
ಈ ಎಐ ವಿಡಿಯೋ ವಿವಾದ ಭುಗಿಲೇಳುತ್ತಿದ್ದಂತೆ ಎಕ್ಸ್ ಸಂಸ್ಥೆಯ ಎಐ ಚಾಟ್‌ಬಾಟ್ ‘ಗ್ರಾಕ್’ (Grok) ಈ ಕುರಿತು ಫ್ಯಾಕ್ಟ್‌ಚೆಕ್ ಮಾಡಿದೆ. ಗ್ರಾಕ್ ವರದಿಯ ಪ್ರಕಾರ, ಬೆಂಜಮಿನ್ ನೆತನ್ಯಾಹು ಅವರಿಗೆ ಆರು ಬೆರಳುಗಳಿಲ್ಲ. ವಿಡಿಯೋದಲ್ಲಿ ಕಂಡುಬಂದಿರುವುದು ಕೇವಲ ಬೆಳಕು, ನೆರಳಿನ ಆಟ ಹಾಗೂ ಕ್ಯಾಮೆರಾ ಕೋನದಿಂದ ಉಂಟಾದ ದೃಷ್ಟಿ ಭ್ರಮೆಯಾಗಿದೆ. ಇಸ್ರೇಲ್ ಸರ್ಕಾರದ ಅಧಿಕೃತ ವಿಡಿಯೋಗಳಲ್ಲಿ ಅವರ ಕೈಯಲ್ಲಿ ಸಹಜವಾದ ಐದೇ ಬೆರಳುಗಳಿರುವುದು ಸ್ಪಷ್ಟವಾಗಿ ಕಾಣುತ್ತದೆ ಎಂದು ಗ್ರಾಕ್ ವದಂತಿಗಳಿಗೆ ತೆರೆ ಎಳೆದಿದೆ.
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಫೆಬ್ರವರಿ 28 ರಂದು ಇರಾನ್ ವಿರುದ್ಧ ದಾಳಿ ಆರಂಭಿಸಿದ್ದು, ಯುದ್ಧದ ಮೊದಲ ದಿನವೇ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆಗೈದಿತ್ತು. ಅದಕ್ಕೆ ಪ್ರತೀಕಾರವೆಂಬಂತೆ ಇರಾನ್ ಕೂಡ ಮಧ್ಯಪ್ರಾಚ್ಯದ ದೇಶಗಳು, ಇಸ್ರೇಲ್ ಮೇಲೆ ದಾಳಿ ತೀವ್ರಗೊಳಿಸಿತ್ತು. ಈ ಯುದ್ಧ ಈಗ 16ನೇ ದಿನಕ್ಕೆ ಕಾಲಿಟ್ಟಿದ್ದು, ಯುದ್ಧ ಮುಂದುವರಿದಿದೆ. ಇದರ ಜೊತೆಗೆ ಜಗತ್ತಿನ ಪ್ರಮುಖ ತೈಲ ಸಾಗಾಟ ಮಾರ್ಗವಾದ ‘ಹೊರ್ಮುಜ್ ಜಲಸಂಧಿ’ಯನ್ನು ಇರಾನ್ ಮುಚ್ಚಿದೆ. ಪ್ರತಿದಿನ ಸುಮಾರು 20 ಮಿಲಿಯನ್ ಬ್ಯಾರೆಲ್ ತೈಲ ಹಾಗೂ ಶೇಕಡಾ 20ರಷ್ಟು ಜಾಗತಿಕ ದ್ರವೀಕೃತ ನೈಸರ್ಗಿಕ ಅನಿಲ ಸಾಗಣೆಯಾಗುವ ಈ ಪ್ರಮುಖ ಮಾರ್ಗ ಬಂದ್ ಆಗಿರುವುದರಿಂದ ಜಾಗತಿಕ ವಾಣಿಜ್ಯ ಮತ್ತು ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.
ಇದನ್ನೂ ಓದಿ : ಚಿತ್ರದುರ್ಗದಲ್ಲಿ ಭೀಕರ ಅಪಘಾತ.. ಮೂವರು ರಿಸರ್ವ್ ಸಬ್ ಇನ್ಸ್‌ಪೆಕ್ಟರ್‌ಗಳು ಸ್ಥಳದಲ್ಲೇ ಸಾವು!



















