ನವದೆಹಲಿ: ನೇಪಾಳದ ಕಮ್ಯುನಿಸ್ಟ್ ಪಾರ್ಟಿ (ಯುನಿಫೈಡ್ ಮಾರ್ಕ್ಸ್ವಾದಿ ಲೆನಿನಿಸ್ಟ್) ಬೆಂಬಲವನ್ನು ಹಿಂಪಡೆದುಕೊಂಡಿದ್ದರಿಂದ ಪ್ರಚಂಡ ಅವರ ಸರ್ಕಾರ ಪತನವಾಗಿದೆ. ವಿಶ್ವಾಸ ಮತದ ಸೋಲು ಅನುಭವಿಸಿದ್ದರಿಂದ 69 ವರ್ಷದ ನಾಯಕ ಪ್ರಚಂಡ ಪ್ರಧಾನಿ ಗದ್ದುಗೆಯಿಂದ ಕೆಳಗಿಳಿಯಬೇಕಾಗುತ್ತದೆ.
ವರದಿಯಂತೆ, ಸಂಸತ್ತಿನ ಕೆಳಮನೆಯಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಅವರು ಗೆಲ್ಲಲು ಅಗತ್ಯವಿದ್ದ ಅರ್ಧಕ್ಕಿಂತ ಹೆಚ್ಚು ಸದಸ್ಯರ ಬೆಂಬಲವನ್ನು ಪಡೆಯಲು ಪ್ರಚಂಡ ವಿಫಲರಾಗಿದ್ದಾರೆ. ನೇಪಾಳ ಸಂಸತ್ತಿನ ಸ್ಪೀಕರ್ ದೇವ್ ರಾಜ್ ಘಿಮಿರೆ ಪ್ರಕಾರ, 275 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (HOR) ನಲ್ಲಿ 69 ವರ್ಷದ ಪ್ರಚಂಡ 63 ಮತಗಳನ್ನು ಪಡೆದಿದ್ದಾರೆ. ಈ ನಿರ್ಣಯದ ವಿರುದ್ಧ 194 ಮತಗಳು ಬಿದ್ದಿದ್ದವು. ವಿಶ್ವಾಸಮತ ಗೆಲ್ಲಲು ಕನಿಷ್ಠ 138 ಮತಗಳ ಅಗತ್ಯವಿದೆ.
ನೇಪಾಳದ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ-ಯುನಿಫೈಡ್ ಮಾರ್ಕ್ಸಿಸ್ಟ್ ಲೆನಿನಿಸ್ಟ್ (CPN-UML) ಸರ್ಕಾರಕ್ಕೆ ತನ್ನ ಬೆಂಬಲವನ್ನು ಹಿಂತೆಗೆದುಕೊಂಡ ನಂತರ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಶುಕ್ರವಾರ ಸಂಸತ್ತಿನಲ್ಲಿ ವಿಶ್ವಾಸ ಮತ ಕಳೆದುಕೊಂಡಿದ್ದಾರೆ. ಪ್ರಚಂಡ ಅವರು ಡಿಸೆಂಬರ್ 25, 2022ರಂದು ಅಧಿಕಾರ ವಹಿಸಿಕೊಂಡಾಗಿನಿಂದ 4 ವಿಶ್ವಾಸ ಮತಗಳನ್ನು ಉಳಿಸಿಕೊಂಡಿದ್ದಾರೆ.