ಉಡುಪಿ: ನೇಜಾರಿನಲ್ಲಿ ತಾಯಿ ಹಾಗೂ ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಸಾಕ್ಷಿಗಳ ಪಾಟಿ ಸವಾಲಿಗೆ ದಿನಾಂಕ ನಿಗದಿಪಡಿಸಿ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ದೂರುದಾರೆ ಐಫಾ, ಆಕೆಯ ತಾಯಿ ಶಾಹಿನ್ ಬೀಬಿ ಮತ್ತು ಆಟೋ ರಿಕ್ಷಾ ಚಾಲಕ ಶ್ಯಾಮ್ ಅವರ ಮುಖ್ಯ ವಿಚಾರಣೆಯನ್ನು ಜೂ. 19 ಮತ್ತು 20ರಂದು ನಡೆಸಲಾಗಿತ್ತು. ಈ ಸಾಕ್ಷಿಗಳ ಪಾಟಿ ಸವಾಲು ನಡೆಸಲು ಆ. 21ರಂದು ದಿನಾಂಕ ನಿಗದಿಪಡಿಸಿ ನ್ಯಾಯಾಧೀಶ ಸಮೀವುಲ್ಲಾ ಆದೇಶಿಸಿದ್ದಾರೆ.
ಈ ಸಂದರ್ಭದಲ್ಲಿ ಆರೋಪಿ ಪರ ವಕೀಲ ರಾಜು ಪೂಜಾರಿ ಅವರಿಗೆ ಪೊಲೀಸರು ಬಾಕಿ ಉಳಿದ ದೋಷಾರೋಪಣ ಪಟ್ಟಿಯ ದಾಖಲೆಗಳನ್ನು ಹಸ್ತಾಂತರಿಸಿದರು. ಆರೋಪಿ ಪ್ರವೀಣ್ ಚೌಗಲೆಯನ್ನು ವೀಡಿಯೋ ಕಾನ್ಸರೆನ್ಸ್ ಮೂಲಕ ವಿಚಾರಣೆಗೆ ಹಾಜರು ಪಡಿಸಲಾಯಿತು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಉಪಸ್ಥಿತರಿದ್ದರು.