ಹುಬ್ಬಳ್ಳಿಯಲ್ಲಿ ಭಯಾನಕ ಘಟನೆಗೆ ಕಾರಣವಾಗಿದ್ದ ವಿದ್ಯಾರ್ಥಿನಿ ಹಾಗೂ ಪುರಸಭೆ ಸದಸ್ಯ ನಿರಂಜನಯ್ಯ ಹಿರೇಮಠ ಪುತ್ರಿ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಸೋಮವಾರ ನ್ಯಾಯಾಲಯಕ್ಕೆ ಸುಮಾರು 483 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಏಪ್ರಿಲ್ 18ರಂದು ವಿದ್ಯಾರ್ಥಿನಿ ನೇಹಾ ಹತ್ಯೆ ನಡೆದಿತ್ತು. ಆರೋಪಿ ಸವದತ್ತಿಯ ಫಯಾಜ್ ಎಂಬಾತ ವಿದ್ಯಾನಗರದ ತನ್ನ ಕಾಲೇಜಿನ ಆವರಣದಲ್ಲಿಯೇ ಬರ್ಬರವಾಗಿ ಚಾಕು ಇರಿದು ಹತ್ಯೆ ಮಾಡಿದ್ದ. ಫಯಾಜ್ ನ ಪ್ರೀತಿಯನ್ನು ನೇಹಾ ತಿರಸ್ಕರಿಸಿದ್ದಳು ಎನ್ನಲಾಗಿದೆ. ಇದೇ ಕೊಲೆಗೆ ಕಾರಣ ಎನ್ನಲಾಗಿದೆ. ಇದನ್ನೇ ಆತ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ರಾಜ್ಯ ಹಾಗೂ ದೇಶಾದ್ಯಂತ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು. ವಿವಿಧ ಸಂಘಟನೆಗಳು, ಬಿಜೆಪಿ ಪಕ್ಷ ಸೇರಿದಂತೆ ವಿಪಕ್ಷಗಳು ನ್ಯಾಯಾಕ್ಕಾಗಿ ಒತ್ತಾಯಿಸಿ ಆರೋಪಿಗೆ ಮರಣ ದಂಡನೆ ವಿಧಿಸಬೇಕೆಂದು ಕೋರಿದ್ದವು.

ನೇಹಾ ತಂದೆ ಹಾಗೂ ಕಾಂಗ್ರೆಸ್ ಪುರಸಭೆ ಸದಸ್ಯ ನಿರಂಜನಯ್ಯ ಹಿರೇಮಠ ಕೂಡ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದ್ದರು. ರಾಜ್ಯ ಸರ್ಕಾರವು ಈ ತನಿಖೆಯನ್ನು ಸಿಐಡಿಗೆ ವಹಿಸಿತ್ತು ಸೋಮವಾರ ಅಧಿಕಾರಿಗಳು ಒಂದನೇ ಹೆಚ್ಚುವರಿ ಸಿವಿಲ್ ಕೋರ್ಟ್ ಹಾಗೂ ಮೂರನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
