ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆಯ ಸಿರ್ಸಿ ಸರ್ಕಲ್ ಬಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವ್ಯಕ್ತಿಯೊಬ್ಬರು ಚರಂಡಿಗೆ ಬಿದ್ದ ಘಟನೆ ನಡೆದಿದೆ.
ಫುಟ್‌ಪಾತ್ ಪಕ್ಕದಲ್ಲಿ ಚರಂಡಿ ನೀರು ಹರಿಯಲು ನಿರ್ಮಿಸಲಾಗಿದ್ದ ತೆರೆಯ ಭಾಗವನ್ನು ಸರಿಯಾಗಿ ಮುಚ್ಚದೆ ಬಿಡಲಾಗಿತ್ತು. ಇದನ್ನು ತಾತ್ಕಾಲಿಕವಾಗಿ ಮುಚ್ಚಲು ಮೇಲ್ಮೈ ಮೇಲೆ ಮರದ ತುಂಡನ್ನು ಇಟ್ಟು ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆಂಬ ಆರೋಪ ಕೇಳಿಬಂದಿದೆ. ಈ ಮರದ ತುಂಡಿನ ಮೇಲೆ ಕಾಲಿಟ್ಟ ವ್ಯಕ್ತಿ ಸಮತೋಲನ ಕಳೆದುಕೊಂಡು ಪಲ್ಟಿಯಾಗಿ ಚರಂಡಿಗೆ ಬಿದ್ದಿದ್ದಾರೆ. ಈ ಸಂಪೂರ್ಣ ಘಟನೆ ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಗೊಂಡಿದೆ.
ಘಟನೆ ಗಮನಿಸಿದ ಸ್ಥಳೀಯರು ತಕ್ಷಣವೇ ಧಾವಿಸಿ, ಚರಂಡಿಗೆ ಬಿದ್ದ ವ್ಯಕ್ತಿಯನ್ನು ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ. ಅವರ ಸ್ಥಿತಿ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸ್ಥಳೀಯರು ಈ ಕುರಿತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಮೋಹಕ ತಾರೆಯ ಮನಸ್ಸು ಮಿಡಿದಿದ್ದು ಯಾರಿಗೆ?



















