ನವದೆಹಲಿ: ವೈದ್ಯಕೀಯ ಕೋರ್ಸ್ ಗಳ ಪ್ರವೇಶಾತಿಗಾಗಿ ನಡೆಯುವ 2025ರ ನೀಟ್ ಪಿಜಿ ಪರೀಕ್ಷೆಯ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ. ಜೂನ್ 15 ರಂದು ನಡೆಯಬೇಕಿದ್ದ ನೀಟ್ ಪಿಜಿ ಪರೀಕ್ಷೆ ಮುಂದೂಡುವುದಾಗಿ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನಗಳ ಪರೀಕ್ಷಾ ಮಂಡಳಿ (NBEMS) ಪ್ರಕಟಿಸಿದೆ. ಮುಂದೂಡಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಆಗಸ್ಟ್ 3ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
ನೀಟ್ ಪಿಜಿ ಪರೀಕ್ಷೆಯನ್ನು ಒಂದೇ ಶಿಫ್ಟ್ ನಲ್ಲಿ ನಡೆಸಬೇಕೆಂದು ಮೇ 30 ರಂದು ಸುಪ್ರೀಂ ಕೋರ್ಟ್ ಆದೇಶಿಸಿದ ನಂತರ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು ಮುಂದೂಡುವ ಘೋಷಣೆ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಪರೀಕ್ಷೆ ನಡೆಸುವಿಕೆಯಲ್ಲಿ ಸಂಪೂರ್ಣ ಪಾರದರ್ಶಕತೆಯ ಅಗತ್ಯವನ್ನು ಒತ್ತಿಹೇಳಿದೆ ಮತ್ತು ಪರೀಕ್ಷೆಯನ್ನು ನ್ಯಾಯಯುತವಾಗಿ ನಡೆಸಲು ಸುರಕ್ಷಿತ ಕೇಂದ್ರಗಳನ್ನು ಗುರುತಿಸಬೇಕು ಎಂದು ಆದೇಶ ನೀಡಿದೆ.
ಆಗಸ್ಟ್ 3ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯಲು ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಂ ಕ್ರಮ ತೆಗೆದುಕೊಳ್ಳಲಿದೆ. ಇದಕ್ಕಾಗಿ ಟಿಸಿಎಸ್ಅನ್ನು ಟೆಕ್ನಾಲಜಿ ಪಾರ್ಟನರ್ ಮಾಡಿಕೊಂಡಿದ್ದು, ದೇಶಾದ್ಯಂತ ಈಗ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಲಾಗಿದೆ.
ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಭದ್ರತೆಯ ವ್ಯವಸ್ಥೆ ಮಾಡಬೇಕು. ಇದಕ್ಕೆ ಸಮಯಾವಕಾಶ ಬೇಕು. ಜತೆಗೆ ಪರೀಕ್ಷಾ ಅಭ್ಯರ್ಥಿಗಳಿಗೂ ಪರೀಕ್ಷಾ ಕೇಂದ್ರಗಳ ಬಗ್ಗೆ ತಿಳಿಸಲು ಸಮಯ ಬೇಕು. ಹೀಗಾಗಿ ನೀಟ್ ಪಿಜಿ ಪರೀಕ್ಷಾ ದಿನಾಂಕವನ್ನು ಮುಂದೂಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಪಠ್ಯಕ್ರಮ ಡೌನ್ ಲೋಡ್ ಹೇಗೆ?
ಅಭ್ಯರ್ಥಿಗಳು ಪರೀಕ್ಷೆಗೆ ಪಠ್ಯಕ್ರಮ ಸೇರಿ ಹೆಚ್ಚಿನ ಮಾಹಿತಿಗಳನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ ಅಧಿಕೃತ ವೆಬ್ಸೈಟ್ nbe.edu.in ಅಥವಾ https://natboard.edu.in ಗೆ ಭೇಟಿ ನೀಡಿ ಡೌನ್ ಲೋಡ್ ಮಾಡಿಕೊಳ್ಳಬಹುದು.