ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನೀರಜ್ ಚೋಪ್ರಾ ಕ್ಲಾಸಿಕ್ 2025 (Neeraj Chopra Classic 2025)ರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಬಂಗಾರ ಗೆದ್ದಿದ್ದಾರೆ.
ನೀರಜ್ ಚೋಪ್ರಾ (Neeraj Chopra) ಚೊಚ್ಚಲ ಆವೃತ್ತಿಯಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ನೀರಜ್ ಈ ಸ್ಪರ್ಧೆಯಲ್ಲಿ 86.18 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿದರು. ಕೀನ್ಯಾದ ಜೂಲಿಯಸ್ ಯೆಗೊ 84.51 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಪದಕ, ಶ್ರೀಲಂಕಾದ ರುಮೇಶ್ ಪತಿರಾಜೆ 84.34 ಮೀಟರ್ ಎಸೆಯುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಕ್ಕಿದರು. ನಾಲ್ಕನೇ ಸ್ಥಾನ ಪಡೆದ ಭಾರತದ ಸಚಿನ್ ಯಾದವ್ 82.33 ಮೀಟರ್ ಎಸೆದರು.
ನೀರಜ್ ಚೋಪ್ರಾ ಎರಡನೇ ಪ್ರಯತ್ನದಲ್ಲಿ 82.99 ಮೀಟರ್ ದೂರ ಎಸೆದರೆ, ಮೂರನೇ ಪ್ರಯತ್ನದಲ್ಲಿ 86.18 ಮೀಟರ್ ದೂರ ಎಸೆದು ಚಿನ್ನ ಖಾತ್ರಿ ಮಾಡಿಕೊಂಡರು. ಹಾಜರಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಅವರನ್ನು ಹುರಿದುಂಬಿಸಿದರು. ಐದನೇ ಪ್ರಯತ್ನದಲ್ಲಿ 84.07 ಮೀಟರ್ ದೂರ ಎಸೆದ ನೀರಜ್ ಆರನೇ ಮತ್ತು ಕೊನೆಯ ಪ್ರಯತ್ನದಲ್ಲಿ 82.22 ಮೀಟರ್ ದೂರ ಎಸೆದರು.
ನೀರಜ್ ಚೋಪ್ರಾ ಕ್ಲಾಸಿಕ್ ಸ್ಪರ್ಧೆಯಲ್ಲಿ ಏಳು ಪ್ರಮುಖ ಅಂತಾರಾಷ್ಟ್ರೀಯ ಜಾವೆಲಿನ್ ಎಸೆತಗಾರರು ಸೇರಿದಂತೆ 12 ಜಾವೆಲಿನ್ ಎಸೆತಗಾರರು ಭಾಗವಹಿಸಿದ್ದರು. ಚೋಪ್ರಾ ಸೇರಿದಂತೆ ಐವರು ಭಾರತೀಯರು ಕೂಡ ಕಣದಲ್ಲಿದ್ದರು.