ಹರಿಯಾಣದಲ್ಲಿ ಮೂರನೇ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಸಿಎಂ ಆಗಿ ನಯಾಬ್ ಸಿಂಗ್ ಸೈನಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಶಾಸಕಾಂಗ ಪಕ್ಷದ ನಾಯಕರಾಗಿ ಬುಧವಾರ ಆಯ್ಕೆಯಾಗಿದ್ದರು. ಈ ವೇಳೆ ವೀಕ್ಷಕರಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಆಗಮಿಸಿದ್ದರು. ಆನಂತರ ನಯಾಬ್ ಸಿಂಗ್ ಸೈನಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ರಾಜಭವನಕ್ಕೆ ಆಗಮಿಸಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.
ಅದೇ ರೀತಿ ಇಂದು ಮಧ್ಯಾಹ್ನ ನಯಾಬ್ ಸಿಂಗ್ ಸೈನಿ ಪಂಚಕುಲದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹೀಗಾಗಿ ಈ ಪ್ರದೇಶದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಭಾಗವಹಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದಿತ್ತು. ಒಟ್ಟು 90 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 45 ಮ್ಯಾಜಿಕ್ ನಂಬರ್ ಆಗಿತ್ತು. ಹೀಗಾಗಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರ ರಚಿಸಿದೆ. ಅಲ್ಲದೇ, ಬೇರೆ ಬೇರೆ ಪಕ್ಷಗಳ ಸದಸ್ಯರು, ಪಕ್ಷೇತರರು ಬಿಜೆಪಿಗೆ ಬೆಂಬಲ ನೀಡಿದ್ದು, ಬಿಜೆಪಿಯ ಬಲ 51 ಆಗಿದೆ. ಸೈನಿ ಹೊರತುಪಡಿಸಿ ಒಟ್ಟು 12 ಶಾಸಕರು ಪ್ರಮಾಣ ವಚನ ಸ್ವೀಕರಿಸಬಹುದು.