ಕುಂದಾಪುರ | ಶಾಸಕ ಗುರುರಾಜ್ ಗಂಟಿಹೊಳೆಯವರ ಪರಿಕಲ್ಪನೆಯ ಬೈಂದೂರು ಉತ್ಸವ 2026ರ ಅಂಗವಾಗಿ ಬೃಹತ್ ‘ನಾವುಂದ ಗ್ರಾಮೋತ್ಸವ’ ಜನವರಿ 17ರಂದು ನಡೆಯಲಿದ್ದು, ನಾವುಂದ ಗ್ರಾಮ ಪಂಚಾಯತ್ ಹಾಗೂ ಸಂಗಮ ಸಂಜೀವಿನಿ ಒಕ್ಕೂಟದ ಸಹಯೋಗದಲ್ಲಿ ಗ್ರಾಮೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ.
ಈ ಗ್ರಾಮೋತ್ಸವದ ಅಂಗವಾಗಿ ಜನಸಾಮಾನ್ಯರ ಆರೋಗ್ಯ, ಉದ್ಯೋಗ, ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಜಾಗೃತಿಯನ್ನು ಗುರಿಯಾಗಿಸಿಕೊಂಡು ಒಂದು ದಿನದ ಬೃಹತ್ ಆರೋಗ್ಯ ಮತ್ತು ಸೇವಾ ಶಿಬಿರವನ್ನು ನಡೆಸಲಾಗುತ್ತಿದ್ದು, ಈ ಬಗ್ಗೆ ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನವರಿ 17ರ ಬೆಳಿಗ್ಗೆ 9.00 ಗಂಟೆಯಿಂದ ನಾವುಂದ ಗ್ರಾಮ ಪಂಚಾಯತ್ ಆವರಣದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಸುಲಭವಾಗಿ ಲಭ್ಯವಾಗದ ವಿವಿಧ ವೈದ್ಯಕೀಯ ಹಾಗೂ ಸರ್ಕಾರಿ ಸೇವೆಗಳನ್ನು ಒಂದೇ ಸ್ಥಳದಲ್ಲಿ ಆಯೋಜಿಸಲಾಗಿದೆ. ಆರೋಗ್ಯ ಇಲಾಖೆ, ಆಯುಷ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅಂಚೆ ಇಲಾಖೆ, ಪಶು ಸಂಗೋಪನಾ ಇಲಾಖೆ, ಕಂದಾಯ ಇಲಾಖೆ ಹಾಗೂ ಇತರ ಸರ್ಕಾರಿ ಇಲಾಖೆಗಳು ಸಕ್ರಿಯವಾಗಿ ಭಾಗವಹಿಸಲಿವೆ. ಈ ಮೂಲಕ ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ನೇರ ಸೇವೆಗಳನ್ನು ಒದಗಿಸಲಾಗುತ್ತದೆ.

‘ನಾವುಂದ ಗ್ರಾಮೋತ್ಸವ’ದ ಪ್ರಮುಖ ಆಕರ್ಷಣೆಯಾಗಿ ಉಚಿತ ವೈದ್ಯಕೀಯ ತಪಾಸಣೆಗಳನ್ನು ನಡೆಸಲಾಗುತ್ತದೆ. ಸಾಮಾನ್ಯ ಆರೋಗ್ಯ ತಪಾಸಣೆ, ರಕ್ತದ ಒತ್ತಡ, ಮಧುಮೇಹ (ಶುಗರ್), ರಕ್ತ ಪರೀಕ್ಷೆ, ECG ಪರೀಕ್ಷೆ, ಎನ್‌ಸಿಡಿ (NCD) ರೋಗಗಳ ತಪಾಸಣೆ, ಕಣ್ಣು ಹಾಗೂ ದಂತ ತಪಾಸಣೆ ಸೇರಿದಂತೆ ಹಲವು ಪರೀಕ್ಷೆಗಳು ಉಚಿತವಾಗಿ ಮಾಡಲಾಗುತ್ತದೆ. ಅಗತ್ಯವಿರುವವರಿಗೆ ವೈದ್ಯರಿಂದ ಸಲಹೆ ಹಾಗೂ ಔಷಧ ವಿತರಣೆ ಸಹ ಮಾಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ಗರ್ಭಿಣಿ ಮಹಿಳೆಯರ ತಪಾಸಣೆ, ಮಕ್ಕಳ ಆರೋಗ್ಯ ಪರಿಶೀಲನೆ, ಪೋಷಣಾ ಆಹಾರ ಕುರಿತು ಸಲಹೆಗಳು ಮತ್ತು ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ. ಆಯುಷ್ ಇಲಾಖೆಯಿಂದ ಆಯುರ್ವೇದ ಮತ್ತು ನೈಸರ್ಗಿಕ ಚಿಕಿತ್ಸೆಗಳ ಕುರಿತು ಮಾಹಿತಿ ಮತ್ತು ಸಲಹೆ ನೀಡಲಾಗುತ್ತದೆ.
ಗ್ರಾಮೀಣ ಜೀವನಾಧಾರಿತ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ರೈತರಿಗೆ ಬೆಳೆ ಅಭಿವೃದ್ಧಿ, ಬೀಜ, ಗೊಬ್ಬರ, ಕೃಷಿ ಯೋಜನೆಗಳ ಮಾಹಿತಿ ನೀಡಲಾಗುತ್ತದೆ. ಪಶು ಸಂಗೋಪನಾ ಇಲಾಖೆ ಮೂಲಕ ಜಾನುವಾರುಗಳ ಆರೋಗ್ಯ ತಪಾಸಣೆ ಹಾಗೂ ಲಸಿಕೆ ಕಾರ್ಯಕ್ರಮಗಳು ನಡೆಯಲಿವೆ.
ಇನ್ನು MGNREGA (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ)ಗೆ ಸಂಬಂಧಿಸಿದ ಮಾಹಿತಿ, ನೋಂದಣಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಕಂದಾಯ ಇಲಾಖೆ ಮೂಲಕ ಸಾರ್ವಜನಿಕರ ದಾಖಲೆ ಸಂಬಂಧಿತ ಸಮಸ್ಯೆಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಅಂಚೆ ಇಲಾಖೆಯಿಂದ ವಿವಿಧ ಉಳಿತಾಯ ಮತ್ತು ಸರ್ಕಾರಿ ಯೋಜನೆಗಳ ಕುರಿತು ಅರಿವು ಮೂಡಿಸಲಾಗುತ್ತದೆ.
ಮಧ್ಯಾಹ್ನ 12.00 ಗಂಟೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಜೊತೆಗೆ ಗ್ರಾಮೋತ್ಸವದ ಸಂಭ್ರಮವನ್ನು ಹೆಚ್ಚಿಸಲಿದೆ.
ಈ ಸಮಗ್ರ ಕಾರ್ಯಕ್ರಮದ ಯಶಸ್ಸಿಗೆ ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ, ಉಪಾಧ್ಯಕ್ಷರು, ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಾಕ್ಷಿಯಾಗಲಿದ್ದಾರೆ. ಗ್ರಾಮೀಣ ಜನತೆಗೆ ಆರೋಗ್ಯ, ಮಾಹಿತಿ ಮತ್ತು ಸೇವೆಗಳನ್ನು ಒಂದೇ ದಿನ ಒಂದೇ ಸ್ಥಳದಲ್ಲಿ ಒದಗಿಸುವ ಈ ಪ್ರಯತ್ನವು ನಾವುಂದ ಗ್ರಾಮೋತ್ಸವ 2026 ಅನ್ನು ಅರ್ಥಪೂರ್ಣ ಹಾಗೂ ಜನಪರ ಕಾರ್ಯಕ್ರಮವನ್ನಾಗಿ ಮಾಡಲಿದೆ. ಗ್ರಾಮದ ಪ್ರತಿಯೊಬ್ಬ ನಾಗರಿಕರೂ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ತಮ್ಮ ಆರೋಗ್ಯ ಮತ್ತು ಬದುಕಿನ ಗುಣಮಟ್ಟವನ್ನು ಸುಧಾರಿಸಿಕೊಳ್ಳಬೇಕೆಂದು ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು | ಮನಸೋಯಿಚ್ಛೆ ಥಳಿಸಿ, ಚಿತ್ರಹಿಂಸೆ ನೀಡಿ ನಾಯಿ ಮರಿಯನ್ನು ಕೊಂದ ಪಾಪಿ!



















