ಬೆಂಗಳೂರು: ಭಾರತೀಯ ಮೋಟಾರ್‌ಸ್ಪೋರ್ಟ್ಸ್ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, 2025ರ ಡಿಸೆಂಬರ್‌ನಲ್ಲಿ ನಡೆಯಲಿರುವ ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನ (IRF) ಗ್ರ್ಯಾಂಡ್ ಫಿನಾಲೆಗೆ ಮುಂಬೈ ಆತಿಥ್ಯ ವಹಿಸಲಿದೆ. ಇದಕ್ಕಾಗಿ ನವಿ ಮುಂಬೈನಲ್ಲಿ ದೇಶದ ಮೊದಲ ಎಫ್‌ಐಎ-ಗ್ರೇಡ್ ನೈಟ್ ಸ್ಟ್ರೀಟ್ ಸರ್ಕ್ಯೂಟ್ ಸಿದ್ಧಗೊಳ್ಳುತ್ತಿದ್ದು, ಆರ್‌ಪಿಪಿಎಲ್ ಮತ್ತು ನವಿ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (NMMC) ನಡುವೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ನವಿ ಮುಂಬೈನ ಪಾಮ್ ಬೀಚ್ ರಸ್ತೆಯಿಂದ ಆರಂಭವಾಗುವ ಈ ಸರ್ಕ್ಯೂಟ್, 3.753 ಕಿ.ಮೀ ಉದ್ದವಿದ್ದು, 14 ಸವಾಲಿನ ತಿರುವುಗಳನ್ನು ಹೊಂದಿದೆ. ನೆರುಲ್ ಸರೋವರದ ಸುಂದರ ನೋಟದೊಂದಿಗೆ, ದೀಪಾಲಂಕಾರದಿಂದ ಕಂಗೊಳಿಸುವ ರಸ್ತೆಗಳಲ್ಲಿ ರಾತ್ರಿ ವೇಳೆ ರೇಸರ್‌ಗಳು ತಮ್ಮ ಕೌಶಲ್ಯ ಪ್ರದರ್ಶಿಸಲಿದ್ದಾರೆ. ಈ ಮೂಲಕ ಮುಂಬೈ, ಜಾಗತಿಕ ಮೋಟಾರ್‌ಸ್ಪೋರ್ಟ್ ನಕ್ಷೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ.
ಈ ಐತಿಹಾಸಿಕ ಕ್ಷಣದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, “ಈ ರೇಸ್ ರಾಜ್ಯದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಲ್ಲದೆ, ಯುವ ರೇಸರ್‌ಗಳು, ಇಂಜಿನಿಯರಿಂಗ್, ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರತಿಭೆಗಳಿಗೆ ಪ್ರೇರಣೆಯಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆರ್‌ಪಿಪಿಎಲ್ ಅಧ್ಯಕ್ಷ ಅಖಿಲೇಶ್ ರೆಡ್ಡಿ, “‘ನಿದ್ದೆ ಮಾಡದ ನಗರ‘ ಮುಂಬೈನಲ್ಲಿ ರಾತ್ರಿ ರೇಸ್ ಆಯೋಜಿಸುತ್ತಿರುವುದು ಒಂದು ವಿಶಿಷ್ಟ ಅನುಭವವಾಗಲಿದೆ. ಇದು ಭಾರತೀಯ ಮೋಟಾರ್‌ಸ್ಪೋರ್ಟ್ಸ್‌ಗೆ ಹೊಸ ಮಾನದಂಡವನ್ನು ಸ್ಥಾಪಿಸಲಿದೆ,” ಎಂದು ಹೇಳಿದರು.
ತಾರೆಯರ ತಂಡಗಳ ಸ್ಪರ್ಧೆ
ಈ ರೇಸಿಂಗ್ ಉತ್ಸವವು ಸಿನಿಮಾ ಮತ್ತು ಕ್ರೀಡಾ ಕ್ಷೇತ್ರದ ದಿಗ್ಗಜರ ಮಾಲೀಕತ್ವದ ತಂಡಗಳ ಭಾಗವಹಿಸುವಿಕೆಯಿಂದ ಮತ್ತಷ್ಟು ರಂಗೇರಲಿದೆ. ಪ್ರಮುಖ ತಂಡಗಳು ಹೀಗಿವೆ:
* ಗೋವಾ ಏಸಸ್ JA ರೇಸಿಂಗ್: ಜಾನ್ ಅಬ್ರಹಾಂ
* ಸ್ಪೀಡ್ ಡೀಮನ್ಸ್ ದೆಹಲಿ: ಅರ್ಜುನ್ ಕಪೂರ್
* ಕೊಲ್ಕತಾ ರಾಯಲ್ ಟೈಗರ್ಸ್: ಸೌರವ್ ಗಾಂಗೂಲಿ
* ಕಿಚ್ಚಾ’ಸ್ ಕಿಂಗ್ಸ್ ಬೆಂಗಳೂರು: ಕಿಚ್ಚ ಸುದೀಪ್
* ಹೈದರಾಬಾದ್ ಬ್ಲಾಕ್‌ಬರ್ಡ್ಸ್: ನಾಗ ಚೈತನ್ಯ
* ಚೆನ್ನೈ ಟರ್ಬೋ ರೈಡರ್ಸ್: ಡಾ. ಶ್ವೇತಾ ಸುಂದೀಪ್ ಆನಂದ್



















