ಮಧ್ಯಮ ವರ್ಗದ ಯುವಕನ ಕನಸುಗಳ ಸುತ್ತ ನಡೆಯುವ ಘಟನೆಗಳನ್ನು ಹಾಸ್ಯಮಯವಾಗಿ ನಿರೂಪಿಸಿರುವ ಚಿತ್ರ ವಿಕ್ಕಿ. ದೀಪಕ್ ಎಸ್. ಅವಂದಕರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ಕೇಸರಿನಂದನ ಸಿನಿ ಕ್ರಿಯೇಶನ್ಸ್ ಅಡಿ ನವನೀತ ಲಕ್ಷ್ಮಿ ನಿರ್ಮಿಸಿದ್ದಾರೆ. ಕೆ.ಆರ್.ಸುರೇಶ್ ಕಾರ್ಯಕಾರಿ ನಿರ್ಮಾಪಕರು.
ಇತ್ತೀಚೆಗೆ ನಡೆದ ಸಮಾರಂಭದಲ್ಲಿ ತರುಣ್ ಸುಧೀರ್ ಅವರ ತಾಯಿ ಮಾಲತಿ ಸುಧೀರ್ ಹಾಗೂ ನಟ ನವೀನ್ ಶಂಕರ್ ಈ ಚಿತ್ರದ ಟ್ರೈಲರ್ ನ್ನು ಬಿಡುಗಡೆಗೊಳಿಸಿದರು.
ದಾವಣಗೆರೆ ಮೂಲದ ನಿರ್ದೇಶಕ ದೀಪಕ್ ಚಿತ್ರದ ಬಗ್ಗೆ ಮಾತನಾಡಿ, ಈ ಚಿತ್ರದ ಮೂಲಕ ಮೊದಲಬಾರಿಗೆ ನಿರ್ದೇಶನದ ಅವಕಾಶ ನೀಡಿದ್ದಾರೆ. ವಿಕ್ಕಿ ಕಾಮಿಡಿ ಜಾನರ್ ಚಿತ್ರ, ಮಿಡಲ್ ಕ್ಲಾಸ್ ಹುಡುಗನೊಬ್ಬ ದೊಡ್ಡ ಕನಸು ಕಂಡು, ಅದನ್ನು ನನಸು ಮಾಡಿಕೊಳ್ಳಲು ಹೋದಾಗ ಏನೆಲ್ಲ ಆಗಬಹುದು ಎಂಬುದನ್ನು ಹಾಸ್ಯಮಿಶ್ರಿತವಾಗಿ ವಿಕ್ಕಿ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಬೆಂಗಳೂರು, ಚಿಕ್ಕಮಗಳೂರು ಸುತ್ತಮುತ್ತ 35 ದಿನಗಳ ಕಾಲ ಚಿತ್ರವನ್ನು ಚಿತ್ರೀಕರಿಸಿದ್ದೇವೆ.
ನಮ್ಮ ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದ್ದು, ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಪಡೆದಿದೆ, ಮೇ ೨ನೇ ವಾರ ವಿಕ್ಕಿ ಚಿತ್ರವನ್ನು ರಿಲೀಸ್ ಮಾಡುವ ಯೋಜನೆಯಿದೆ ಎಂದರು. ಮಾಲತಿ ಸುಧೀರ್ ಮಾತನಾಡಿ, ಈಗ ಮನರಂಜನೆ ನಮ್ಮ ಮನೆಗಳಿಗೆ ಬಂದಿದೆ. ಜನರು ಥಿಯೇಟರಿಗೆ ಬಂದು ಸಿನಿಮಾ ನೋಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಟ್ರೈಲರ್ ನೀಡಿದಾಗ ಇದರಲ್ಲಿ ಏನೋ ವಿಶೇಷತೆ ಇದೆ ಅನಿಸುತ್ತದೆ. ಚಿತ್ರ ಜನರ ಮನ ಗೆಲ್ಲಲಿ ಎಂದರು.
ನವೀನ್ ಶಂಕರ್ ಮಾತನಾಡಿ, ನಾನಿಲ್ಲಿ ಬರಲು ರಾಜು ತಾಳಿಕೋಟೆ ಕಾರಣ. ಹ್ಯೂಮರಸ್ ಜತೆ ಸಸ್ಪೆನ್ಸ್ ಕಂಟೆಂಟ್ ಇರುವ ಟ್ರೈಲರ್ ಚೆನ್ನಾಗಿದೆ. ಇವರ ಕಾನ್ಸೆಪ್ಟ್ ಎಲ್ಲರಿಗೂ ರೀಚ್ ಆಗಲಿ. ಹೋರಾಟದ ಹಾದಿಯಲ್ಲಿ ಈ ಸಿನಿಮಾ ಮಾಡಿದ್ದಾರೆ. ಚಿತ್ರತಂಡಕ್ಕೆ ದೊಡ್ಡ ಯಶಸ್ಸು ಸಿಗಲಿ ಎಂದರು.
ನಿರ್ಮಾಪಕಿ ನವನೀತ ಲಕ್ಷ್ಮಿ ಮಾತನಾಡಿ, ನಮ್ಮ ಕೇಸರಿನಂದನ ಸಿನಿ ಕ್ರಿಯೇಶನ್ಸ್ ಮೂಲಕ ಹಿಂದೆ ಚಿತ್ರಲಹರಿ ಎಂಬ ಸಿನಿಮಾ ಮಾಡಿದ್ದೆವು. ಇದು ನಮ್ಮ ಎರಡನೇ ಚಿತ್ರ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿದರು.
ನಾಯಕ ಭರತ್ ತಾಳಿಕೋಟೆ ಮಾತನಾಡಿ, ನಾಲ್ಕೈದು ಸಿನಿಮಾಗಳಲ್ಲಿ ಸಣ್ಣಪುಟ್ಟ ರೋಲ್ ಮಾಡಿದ್ದೆ. ಈ ಚಿತ್ರದ ಮೂಲಕ ಫಸ್ಟ್ ಟೈಮ್ ಹೀರೋ ಆಗಿದ್ದೇನೆ. ಮಧ್ಯಮ ಕುಟುಂಬದ ಹುಡುಗನ ಪಾತ್ರ ನನ್ನದು ಎಂದು ಹೇಳಿದರು. ಸಂಗೀತ ನಿರ್ದೇಶಕ ಆರವ ರಿಶಿಕ್ ಮಾತನಾಡಿ, ಹಿನ್ನೆಲೆ ಸಂಗೀತವೇ ಚಿತ್ರದ ಹೈಲೈಟ್. ಸಿನಿಮಾ ಕಾಮಿಡಿ ಜತೆಗೆ ಕುತೂಹಲಕರವಾಗಿದೆ ಎಂದರು.
ಮತ್ತೊಬ್ಬ ಅತಿಥಿ ಓಂಕಾರ್ ಪುರುಷೋತ್ತಮ್ ಮಾತನಾಡಿ, ವಿಕ್ಕಿ ಎಂಬ ಹೆಸರಲ್ಲೇ ಲಕ್ ಇದೆ. ನಿರ್ದೇಶಕ ದೀಪಕ್ ನನ್ನ ಜತೆ 20ಕ್ಕೂ ಅಧಿಕ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಒಳ್ಳೇ ಪ್ರತಿಭೆಯಿದೆ. ಉತ್ತಮ ಸಿನಿಮಾ ಕೊಟ್ಟಾಗ ಖಂಡಿತ ಜನ ನೋಡ್ತಾರೆ ಎಂದರು.
ನಾಯಕಿ ವಿಂಧ್ಯ ಹೆಗಡೆ, ನಟ ವರುಣ್ ದೇವಯ್ಯ ಚಿತ್ರದ ಕುರಿತಂತೆ ಮಾತನಾಡಿದರು. ವಿಕ್ಕಿ ಚಿತ್ರವನ್ನು ರಮೇಶ್ ಬಾಬು ಅವರು ರಿಲೀಸ್ ಮಾಡುತ್ತಿದ್ದಾರೆ.